ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಆರೋಪ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕೆಂದು ಜೆಡಿಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲೂ ಟೆಲಿಫೋನ್ ಕದ್ದಾಲಿಕೆ ಆಗ್ತಿದೆ. ಜೆಡಿಎಸ್ ಹಾಗೂ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ. ಇಂಟೆಲಿಜೆನ್ಸ್ ಡಿಪಾರ್ಟ್ಮೆಂಟ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನನಗೂ ಕೂಡ ಅನಾಮಿಕರೊಬ್ಬರು ಪತ್ರಕರ್ತರ ಹೆಸರಿನಲ್ಲಿ ಕರೆ ಮಾಡಿದ್ರು. ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ದೇವೇಗೌಡರ ಅಭಿಪ್ರಾಯ ಏನು ಅಂತ ಒತ್ತಾಯ ಮಾಡಿ ಕೇಳಿದ್ರು. ಅದಕ್ಕೆ ನಾನು ಅವರನ್ನೇ ಕೇಳಿ ಅಂತ ಹೇಳಿದ್ದೆ. ಸಂಶಯ ಬಂದು ಆ ನಂಬರ್ ಬಗ್ಗೆ ಪರಿಶೀಲಿಸಿದಾಗ ಅದು ಇಂಟೆಲಿಜೆನ್ಸ್ ಡಿಪಾರ್ಟ್ಮೆಂಟಿನಿಂದ ಬಂದಿದ್ದು ಎಂದು ಗೊತ್ತಾಯಿತು ಎಂದು ವಿವರಿಸಿದರು. ಪತ್ರಕರ್ತರ ಹೆಸರಿನಲ್ಲಿ ಇವರು ಯಾಕೆ ಫೋನ್ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಪ್ರತಿಪಕ್ಷದವರನ್ನು ಮಣಿಸಲು ಇಂಟೆಲಿಜೆನ್ಸ್ ಡಿಪಾರ್ಟ್ಮೆಂಟ್ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೆ, ಪೊಲೀಸರು ಇದುವರೆಗೂ ಎಫ್ಐಆರ್ ದಾಖಲಿಸಿಲ್ಲ. ಹಾಗಾಗಿ, ತನಿಖೆಗೆ ಆದೇಶಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ಹೇಳಿದರು.
ಇನ್ನು, ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಕೊಟ್ಟಿರೋದೇ ತಪ್ಪು. ಹಲವಾರು ಪ್ರಕರಣಗಳಲ್ಲಿ ಸಿಬಿಐ ಪ್ರತಿವಾದಿಯಾಗಿದೆ. ಹೀಗಿರುವಾಗ ತನಿಖೆ ನಡೆಸಲು ಸಿಬಿಐಗೆ ಕೊಡೋಕೆ ಹೇಗೆ ಸಾಧ್ಯ? ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಮಾನದಂಡ ರಚನೆ ಮಾಡಬೇಕೆಂದು ಹಿಂದೆಯೇ ನಿರ್ದೇಶನ ನೀಡಿದೆ. ಆದರೆ ಯಾವುದೇ ಸರ್ಕಾರ ಸಮಿತಿ ರಚನೆ ಮಾಡಿ ಗೈಡ್ಲೈನ್ ಮಾಡಿಲ್ಲ ಎಂದರು.
ನಿವೃತ್ತ ನ್ಯಾ. ಸಂತೋಷ್ ಹೆಗ್ಡೆಯವರ ಫೋನ್ ಕೂಡ ಟ್ಯಾಪಿಂಗ್ ಆಗಿತ್ತು. ಆಗ ಸಿಎಂ ಆಗಿದ್ದ ಯಡಿಯೂರಪ್ಪ ವಿರುದ್ಧವೇ ನೇರವಾಗಿ ಆರೋಪ ಮಾಡಿದ್ರು ಎಂದ ರಮೇಶ್ ಬಾಬು, ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಕೊಡೋದು ಬೇಡ. ಈ ಬಗ್ಗೆ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದೇನೆ ಎಂದು ಹೇಳಿದರು. ಕೈಗಾ ಅಣು ಸ್ಥಾವರದಲ್ಲಿರುವ ಇಂಟೆಲಿಜೆನ್ಸ್ ವಿಭಾಗಕ್ಕೆ ಎಡಿಜಿಪಿ ರ್ಯಾಂಕ್ನ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರು ಬರೀ ಫೋನ್ ಕದ್ದಾಲಿಕೆ ಮಾಡುವುದರಲ್ಲಿ ತೊಡಗಿದ್ದಾರೆ ಎಂದು ಇದೇ ವೇಳೆ ರಮೇಶ್ ಬಾಬು ಗಂಭೀರ ಆರೋಪ ಮಾಡಿದರು.