ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಜನ ಸೂಕ್ತ ಸಹಕಾರ ನೀಡುತ್ತಿಲ್ಲ. ಇದರಿಂದ ಸಂಜೆಯೊಳಗೆ ಕಠಿಣ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಜ್ಞ ವೈದ್ಯರ ಜತೆ ಸಭೆ ನಡೆಸಿ ನಿರ್ಧಾರಕ್ಕೆ ಬಂದಿದ್ದೇವೆ. ಮನೆಯಲ್ಲೇ ಇದ್ದು ಸಹಕರಿಸುವಂತೆ ಕೋರಿದ್ದರೂ, ಕ್ವಾರಂಟೈನ್ ರೋಗಿಗಳು ಸರ್ಕಾರದ ಸಲಹೆಗೆ ಸಹಕರಿಸುತ್ತಿಲ್ಲ. ಸರ್ಕಾರ ಸೋಂಕಿನ ಅರಿವು ಮೂಡಿಸಲಿದೆ. ಸಂಜೆಯೊಳಗೆ ಕಠಿಣ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು. ರಾಜ್ಯ ಅಥವಾ ಬೆಂಗಳೂರು ನಗರವನ್ನ ಲಾಕ್‌ಡೌನ್ ಮಾಡುವ ಸಂಬಂಧ ಪ್ರತಿಪಕ್ಷ ನಾಯಕರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಖಾಸಗಿ ಆಸ್ಪತ್ರೆಗಳ ಸಹಕಾರವನ್ನ ಕೇಳಿದ್ದೇವೆ, ಅವರೂ ಸಹ ಸಹಕಾರ ನೀಡಲು ಒಪ್ಪಿದ್ದಾರೆ. ಹೊಸದಾಗಿ 1000 ವೆಂಟಿಲೇಟರ್ ಖರೀದಿಸುತ್ತೇವೆ. 30 ಫೀವರ್ ಕ್ಲಿನಿಕ್ ಆರಂಭಿಸುತ್ತೇವೆ. ಶಂಕಿತರ ಚಿಕಿತ್ಸೆಗೆ ಕ್ರಮಕೈಗೊಳ್ಳುತ್ತೇವೆ. ನಗರ ಪ್ರದೇಶದಲ್ಲಿರುವವರು ಹಳ್ಳಿಗಳಿಗೆ ಹೋಗಬೇಡಿ. ನಿನ್ನೆಯಂತೆ ಬೆಂಗಳೂರಿನಲ್ಲಿ ಜನರನ್ನ ನಿಯಂತ್ರಿಸೋದಕ್ಕೆ ಕ್ರಮಕೈಗೊಳ್ಳುತ್ತೇವೆ. ಸಂಜೆಯೊಳಗೆ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಬೆಂಗಳೂರು ಸಂಪೂರ್ಣ ಲಾಕ್‌ಡೌನ್ ಮಾಡೋದಕ್ಕೆ ಸಲಹೆ ಬಂದಿದೆ. ಬೆಂಗಳೂರಿನಲ್ಲಿ ಯಾವುದೇ ಹಬ್ಬ, ಹರಿದಿನಗಳು ಇಲ್ಲ. ಬೆಂಗಳೂರಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಮುಂದುವರಿಕೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದರು.
ವಿಧಾನಮಂಡಲ ಅಧಿವೇಶನ ಮಾ. 27ರವರೆಗೆ ಮುಂದುವರೆಸುತ್ತೇವೆ. ಪ್ರಧಾನಿ ಈ ರೀತಿಯ ಸಂದರ್ಭಗಳಲ್ಲಿ ಜನಪ್ರತಿನಿಧಿಗಳು ಹಿಂದೆ ಸರಿಯಬಾರದು ಎಂದಿದ್ದಾರೆ. ಹೀಗಾಗಿ ಅಧಿವೇಶನ ನಡೆಸುತ್ತಿದ್ದೇವೆ. ಹೀಗಾಗಿ ನಾವು ಪೂರ್ಣ ಪ್ರಮಾಣದ ಅಧಿವೇಶನ ನಡೆಸುತ್ತೇವೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ರದ್ದು ಮಾಡಲಾಗುತ್ತೆ. ಅಧಿವೇಶನದಲ್ಲಿ ಹಣಕಾಸು ಬಿಲ್ ಪಾಸ್ ಆಗಬೇಕಿದೆ. ಆ ನಂತರ ಅಧಿವೇಶನ ಬೇಕೋ, ಬೇಡವೋ ಎನ್ನುವ ತೀರ್ಮಾನ ಆಗಲಿದೆ ಎಂದರು.
ಖಾಸಗಿ ವೈದ್ಯರ ಜತೆ ನಡೆಸಿದ ಸಭೆಯಲ್ಲಿ ಸಾಕಷ್ಟು ಸಲಹೆ ಸ್ವೀಕರಿಸಲಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ಉಚಿತ ಊಟ ದಿನವಿಡೀ ನೀಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಜಂಟಿ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಬಿ ಶ್ರೀರಾಮುಲು, ಡಿಸಿಎಂ ಅಶ್ವತ್ಥ್ ನಾರಾಯಣ, ಗೃಹಸಚಿವ ಬಸವರಾಜ್ ಬೊಮ್ಮಾಯಿ ಹಾಜರಿದ್ದರು.