ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಯನ್ನು ಕಾರ್ಯಗತಗೂಳಸಲು ಒಪ್ಪಿಗೆ ಸೂಚಿಸಿರುವುದರಿಂದ ಹಾಗೂ ನಾಡಿನ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ನಿಮ್ಮ ಪಾದಯಾತ್ರೆಯನ್ನು ಮೊಟಕುಗೂಳಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಬಿಜೆಪಿ ಹಿರಿಯ ನಾಯಕ ಎಸ್.ಎಂ ಕೃಷ್ಣ ಪತ್ರ ಬರೆದಿದ್ದಾರೆ.
ತಮ್ಮ ನೇತೃತ್ವದಲ್ಲಿ ಮೇಕೆದಾಟು ಸಂಗಮದಿಂದ ಬೆಂಗಳೂರಿನವರೆಗೆ ಬೆಂಗಳೂರಿನ ಭವಿಷ್ಯ ಹಾಗೂ ಸಾರ್ವಜನಿಕ ಕುಡಿಯುವ ನೀರಿನ ಬವಣೆಯನ್ನು ಶಾಶ್ವತವಾಗಿ ನಿವಾರಿಸಲು ರಾಜ್ಯದ ಬಹುದಿನಗಳ ಬೇಡಿಕೆಯಾದ ಮೇಕೆದಾಟು ಅಣಿಕಟ್ಟು ನಿರ್ಮಾಣ ಸಂಬಂಧ ಸರ್ಕಾರಗಳ ಗಮನ ಸೆಳೆಯಲು ತಾವು "ನೀರಿಗಾಗಿ ನಡಿಗೆ” ಪಾದಯಾತ್ರ ಕೈಗೊಂಡಿದ್ದೀರಿ. ಈ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮನುಕುಲಕ್ಕೆ ಗಂಡಾಂತರವಾಗಿ ಕಾಡುತ್ತಿರುವ ಕೋವಿಡ್ ವೈರಸ್ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ವಿವಿಧ ರೀತಿಯಲ್ಲಿ ರೂಪಾಂತರಗೊಂಡು ನಮ್ಮನ್ನು ಕಾಡುತ್ತಿದೆ. ಇದರ ಬೇನೆಯಿಂದ ಇಡೀ ಪ್ರಪಂಚ ನಲುಗಿ ಹೋಗಿದ್ದು ಹಲವು ಸಾವು ನೋವುಗಳು ಸಂಭವಿಸಿ ಅನಾಹುತ ಸೃಷ್ಟಿಸಿದೆ. ಇದರ ನಿಯಂತ್ರಣಕ್ಕೆ ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ ಇನ್ನು ತಹಬದಿಗೆ ಬಂದಿಲ್ಲ ಎಂದು ತಿಳಿಸುತ್ತಾ ಪಾದಯಾತ್ರೆ ಸ್ಥಗಿತಕ್ಕೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ಗೆ ಎಸ್ಎಂ ಕೃಷ್ಣ ಮನವಿ ಮಾಡಿದ್ದಾರೆ.
ಬೆಂಗಳೂರು ವಿಶ್ವದ ನಗರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದು, ಪ್ರಪಂಚದ ನಾನಾ ಮೂಲೆಗಳಿಂದ ಪ್ರತಿನಿತ್ಯ ಜನರು ಬಂದು ಹೋಗುತ್ತಿದ್ದಾರೆ. ಇದರ ಮಧ್ಯೆ ಕೂರೊನಾ ವೈರಸ್ ವೇಗವಾಗಿ ಹಬ್ಬುತ್ತಿದೆ. ಇಂತಹ ಸಂದರ್ಭದಲ್ಲಿ ತಾವು ಕೈಗೊಂಡಿರುವ ಪಾದಯಾತ್ರೆ ಕೋವಿಡ್ ನಿಯಂತ್ರಣ ಕ್ರಮಗಳಿಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಸಲು ಒಪ್ಪಿಗೆ ಸೂಚಿಸಿರುವುದರಿಂದ ಹಾಗೂ ನಾಡಿನ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ನಿಮ್ಮ ಪಾದಯಾತ್ರೆಯನ್ನು ಮೊಟಕುಗೊಳಸಬೇಕೆಂದು ಕೋರುತ್ತೇನೆ ಎಂದು ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ: ಪಾದಯಾತ್ರೆ ನಿಲ್ಲಿಸುತ್ತಾ ಕಾಂಗ್ರೆಸ್?