ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳ ಅರ್ಚಕರ ರಾಜ್ಯಮಟ್ಟದ ಸಮಾವೇಶವನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆಯೋಜಿಸಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ನಡೆದ 3ನೇ ರಾಜ್ಯ ಧಾರ್ಮಿಕ ಪರಿಷತ್ತಿನ 16ನೇ ಸಭೆಯಲ್ಲಿ ರಾಜ್ಯದ ಹಲವಾರು ಧಾರ್ಮಿಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ರಾಜ್ಯ ಸರ್ಕಾರ ಮುಜರಾಯಿ ಅರ್ಚಕರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹೊರತಂದಿದೆ. ತಸ್ಥಿಕ್ ಹಣ ಹೆಚ್ಚಳ, ಅರ್ಚಕರಿಗೆ ವಿಮಾ ಸೌಲಭ್ಯ ಸೇರಿದಂತೆ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಇದಕ್ಕಾಗಿ ಮುಜರಾಯಿ ಇಲಾಖೆಯ ವತಿಯಿಂದ ಅರ್ಚಕರ ಸಮಾವೇಶ ಏರ್ಪಡಿಸುವಂತೆಯೂ ಸದಸ್ಯರು ಕೋರಿಕೆ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸೆಪ್ಟೆಂಬರ್ ಕೊನೆಯ ವಾರದಲ್ಲಿ ರಾಜ್ಯಮಟ್ಟದ ಸಮಾವೇಶ ಏರ್ಪಡಿಸುವುದಾಗಿ ತಿಳಿಸಿದರು.
ತೆರವಾಗಿರುವ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರ ಸ್ಥಾನವನ್ನು ಶೀಘ್ರವಾಗಿ ತುಂಬುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಜರಾಯಿ ಇಲಾಖೆಯ ಶೇ.60 ರಷ್ಟು ಹುದ್ದೆಗಳು ಖಾಲಿಯಿವೆ. ಇದನ್ನು ತುಂಬಲು ನೇಮಕಾತಿಗೆ ಅವಕಾಶ ನೀಡುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ತಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದ ಪ್ರಮುಖ ಶ್ರದ್ಧಾ ಕೇಂದ್ರ ಕುಕ್ಕೆಯಲ್ಲಿ ಭಕ್ತರಿಗೆ ಇನ್ನೂ ಹೆಚ್ಚಿನ ಉತ್ತಮ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡಲಾಯಿತು. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಗಳನ್ನು ಕಡ್ಡಾಯವಾಗಿ ನಡೆಸಲು ಕ್ರಮ ಕೈಗೊಳ್ಳುವಂತೆಯೂ ಹಾಗೂ ನೂತನ ಜಿಲ್ಲೆ ವಿಜಯನಗರದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ರಚನೆಗೆ ಕ್ರಮ ವಹಿಸುವಂತೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು.
ಕಾಶಿಯಲ್ಲಿರುವ ಕರ್ನಾಟಕ ಛತ್ರವನ್ನು ಸಂಪೂರ್ಣ ನವೀಕರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಆಯುಕ್ತರಿಗೆ ಸೂಚಿಸಿದರು. ಅಲ್ಲದೇ, ಕೂಡಲೇ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಆದೇಶಿಸಿದರು.
(ಇದನ್ನೂ ಓದಿ: ಯಾತ್ರಾರ್ಥಿಗಳಿಗೆ ಖುಷಿ ಸುದ್ದಿ: ರಾಜ್ಯ ಸರ್ಕಾರದಿಂದ ಕಾಶಿ ಯಾತ್ರೆ ಯೋಜನೆ ಆರಂಭ - ಇಲ್ಲಿದೆ ಫುಲ್ ಡಿಟೇಲ್ಸ್)