ಬೆಂಗಳೂರು : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆರಿಕುಂಟೆ ಗ್ರಾಮ ಪಂಚಾಯತ್ ಪಿಡಿಒಗಳಿಂದಾಗುವ ಭ್ರಷ್ಟಾಚಾರ ಹಾಗೂ ಆಶ್ರಯ ಯೋಜನೆಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಬೆಂಗಳೂರಿನಿಂದ ರಾಜ್ಯಮಟ್ಟದ ಸಮಿತಿ ಕಳುಹಿಸಿ ತನಿಖೆ ನಡೆಸಲಾಗುತ್ತದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ ಮಂಡಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆರಿಕುಂಟೆ ಗ್ರಾಮ ಪಂಚಾಯತ್‌ನಲ್ಲಿ 2015-16ನೇ ಸಾಲಿನಲ್ಲಿ ಅಂಬೇಡ್ಕರ್ ಆವಾಸ್ ಯೋಜನೆಯಡಿ ಪದ್ಮಮ್ಮ c/o ನಾರಾಯಣಸ್ವಾಮಿ, ಸಲ್ಲಾಪುರಮ್ಮ c/o ಮುನಿಸ್ವಾಮಿರವರಿಗೆ 2 ಮನೆಯನ್ನು ಮಂಜೂರು ಮಾಡಿತ್ತು.
ಈ ಬಗ್ಗೆ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದ್ದು ಹಿಂದಿನ ಆರಿಕುಂಟೆ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಸದ್ಯ ಪ್ರಕರಣ ವಿಚಾರಣಾ ಹಂತದಲ್ಲಿದೆ ಎಂದು ಹೇಳಿದರು. ಆರಿಕುಂಟೆ ಗ್ರಾಮ ಪಂಚಾಯತ್ ಗಣಕಯಂತ್ರ ನಿರ್ವಾಹಕ ಮುನಿಕದಿರಪ್ಪ 2008-09ನೇ ಸಾಲಿನಲ್ಲಿ ಅವರ ಅತ್ತಿಗೆ ಪದ್ಮಮ್ಮ c/o ನಾರಾಯಣಸ್ವಾಮಿ ಹೆಸರಿನಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಅಕ್ರಮ ಎಸಗಿರುವ ಆರೋಪಗಳ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದು, ಇದೂ ವಿಚಾರಣಾ ಹಂತದಲ್ಲಿದೆ ಎಂದರು.
ಸರ್ಕಾರದ ಉತ್ತರಕ್ಕೆ ತೃಪ್ತರಾಗದ ಸದಸ್ಯ ನಾರಾಯಣಸ್ವಾಮಿ, ಸ್ಥಳೀಯ ಸಮಿತಿ ತನಿಖೆಯಿಂದ ಪ್ರಯೋಜನವಿಲ್ಲ, ರಾಜ್ಯಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು ಆಗ್ರಹಿಸಿದ್ದಾರೆ. ಸದಸ್ಯರ ಬೇಡಿಕೆಗೆ ಸಮ್ಮತಿಸಿದ ಸಚಿವ ಈಶ್ವರಪ್ಪ,ಆರಿಕುಂಟೆ ಆಶ್ರಯ ಯೋಜನೆ ಅಕ್ರಮದ ಕುರಿತು ರಾಜ್ಯಮಟ್ಟದ ಸಮಿತಿಯಿಂದ ತನಿಖೆ ನಡೆಸಲಾಗುತ್ತದೆ. ಬೆಂಗಳೂರಿನಿಂದಲೇ ಸಮಿತಿಯನ್ನು ಕಳುಹಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾ.ಪಂ ವಿದ್ಯುತ್ ಬಿಲ್ ಬಾಕಿ ಸಮಸ್ಯೆ: ಹಳೆ ಮೈಸೂರು ಭಾಗದ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಗ್ರಾಮ ಪಂಚಾಯತ್ ಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ಬೀದಿದೀಪಗಳಿಗೆ ವಿದ್ಯುತ್ ಸ್ಥಗಿತಗೊಳಿಸಿರುವ ಪ್ರಕರಣ ನಡೆದಿದ್ದು ಕೂಡಲೇ ಇಂಧನ ಇಲಾಖೆ ಸಚಿವರ ಜೊತೆ ಮಾತುಕತೆ ನಡೆಸಿ ಇದನ್ನು ಸರಿಪಡಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ನ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಮರಿತಿಪ್ಪೇಗೌಡ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ರಾಜ್ಯದ ಹಲವು ಗ್ರಾಮ ಪಂಚಾಯತ್ ಗಳಲ್ಲಿ ವಿದ್ಯುತ್ ಬಿಲ್ ಬಾಕಿ ಇದೆ, ಸಾಧ್ಯವಾದಷ್ಟು ಪಾವತಿ ಮಾಡಿಕೊಂಡು ಬರಲಾಗುತ್ತಿದೆ.ಇದು 2018 ರಿಂದಲೂ ಬಾಕಿ ಇದೆ, ಇಂಧನ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುತ್ತದೆ.ಚಾಮರಾಜನಗರ ಮೈಸೂರು, ಕೊಡಗು, ಮಂಡ್ಯದಲ್ಲಿನ ಕೆಲ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗಳು ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ಬೀದಿ ದೀಪ ಬಂದ್ ಮಾಡಿದ್ದಾರೆ ಕೂಡಲೇ ಇದನ್ನು ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ,ಇಡೀ ರಾಜ್ಯದಲ್ಲಿ ಹಗಲಿನಲ್ಲಿ ಬೀದಿದೀಪ ಇರಲಿವೆ ಇದನ್ನು ನಿಯಂತ್ರಿಸಿ ಎಂದು ಸಲಹೆ ನೀಡಿದರು. ಇದನ್ನು ಇಂಧನ ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಶ್ವರಪ್ಪ ಭರವಸೆ ನೀಡಿದರು.
ಓದಿ : ಜಲಾಶಯಗಳು ಭರ್ತಿಯಾಗಿದ್ದರೂ ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ!