ಬೆಂಗಳೂರು: ಆರ್ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕುವುದಿಲ್ಲ ಎಂದು ತೀರ್ಮಾನಿಸಿರುವುದನ್ನು ಕರ್ನಾಟಕ ಬಿಜೆಪಿ ಸಂಭ್ರಮದಿಂದ ಸ್ವಾಗತಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ವಾಸ್ತವಿಕ ಘಟ್ಟದಲ್ಲಿ ತನ್ನ ದೇಶದ ರೈತರ, ಬಡವರ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಯಾವ ಮಟ್ಟಕ್ಕೂ ಹೋಗುತ್ತಾರೆ ಎಂದು ಈ ನಿರ್ಧಾರ ತೋರಿಸುತ್ತದೆ. 2009ರಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿತ್ತು. ಮಾತ್ರವಲ್ಲ, ಈ ಪ್ರಮಾದದಿಂದ ಇಲ್ಲಿಯವರೆಗೆ ಆಗಿದ್ದು ಹಾನಿಯೇ ಹೊರತು ಬೇರೇನು ಅಲ್ಲ. ಆದರೆ ಈ ಬಾರಿ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಚಾಣಾಕ್ಷ, ಕುಟಿಲ ಸಂಧಾನಗಳಿಗೆ ಮಣಿಯದೆ ದೇಶದ ಆತಂಕ ಮತ್ತು ಸವಾಲುಗಳನ್ನು ಒಕ್ಕೂಟದ ರಾಷ್ಟ್ರಗಳಿಗೆ ಮನನ ಮಾಡಿಕೊಡಲು ಪ್ರಯತ್ನಿಸಿದ್ದಾರೆ.
ಅದನ್ನು ಒಪ್ಪದಿದ್ದಾಗ ದೇಶದ ಹಿತ್ತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳದೆ ಒಡಂಬಡಿಕೆಯಿಂದ ಹೊರಬಂದಿರುವುದು ನವ ಭಾರತದ ಆತ್ಮ ಶಕ್ತಿಯ ಸಂಕೇತವಾಗಿದೆ. ಪ್ರಧಾನಿ ಮೋದಿಯವರ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತ್ತಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ ಎಂದು ಕಟೀಲ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.