ಆನೇಕಲ್ : ನಗರದ ಚಂದಾಪುರ ಮುಖ್ಯರಸ್ತೆಯ ಮರಸೂರು ಗೇಟ್ ಬಳಿಯ ಇರುವ ಸ್ಪೂರ್ತಿ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ : ಸ್ಪೂರ್ತಿ ಕಾಲೇಜಿನ ಒಟ್ಟು 168 ಮಕ್ಕಳು ಹಾಸ್ಟೆಲ್ನಲ್ಲಿದ್ದಾರೆ. ಮೂರು ಮಂದಿಯಲ್ಲಿ ಪಾಸಿಟಿವ್ ಕಂಡು ಬಂದ ಹಿನ್ನೆಲೆ, 52 ಮಂದಿಗೆ ತಪಾಸಣೆ ನಡೆಸಿದಾದ 12 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇದೀಗ ಎಲ್ಲ ಮಕ್ಕಳಿಗೂ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದು ಡಿಸಿ ತಿಳಿಸಿದರು.
ದಿ ಇಂಟರ್ ನ್ಯಾಷನಲ್ ಬೋರ್ಡಿಂಗ್ ಶಾಲೆ ಕೋವಿಡ್ ಪತ್ತೆ : ದೊಮ್ಮಸಂದ್ರ-ವರ್ತೂರು ಮುಖ್ಯರಸ್ತೆಯಲ್ಲಿರುವ ದಿ ಇಂಟರ್ ನ್ಯಾಷನಲ್ ಸ್ಕೂಲ್ನ 497 ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ವರದಿಯಲ್ಲಿ ಓರ್ವ ಸಿಬ್ಬಂದಿ ಸೇರಿ 34 ಮಂದಿಗೆ ಪಾಸಿಟಿವ್ ದೃಢವಾಗಿದೆ. ಇದೀಗ ಶಾಲೆಗೆ ರಜೆ ಘೋಷಿಸಲಾಗಿದೆ. ಆತಂಕ ಪಡುವ ಅಗತ್ಯ ಇಲ್ಲ. ವೈದ್ಯರ ತಂಡ ನಿಗಾವಹಿಸುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸುತ್ತಾರೆ.
ವಿದ್ಯಾರ್ಥಿ ಆರೋಗ್ಯ ಪರೀಕ್ಷೆ : 4 ಮಂದಿಗೆ ಹೋಂ ಐಸೋಲೇಷನ್, ಬೇರೆ ರಾಜ್ಯದ 9 ಮಂದಿಯನ್ನು ಅವರ ಸ್ವಸ್ಥಳಕ್ಕೆ ಕಳುಹಿಸಲಾಗಿದೆ. ಕೋವಿಡ್ ವ್ಯಾಕ್ಸಿನೇಷನ್ ಎಲ್ಲೆಡೆ ನಡೆಯುತ್ತಿದೆ. ಮನೆ ಮನೆಗೆ ಹೋಗಿ ಲಸಿಕೆ ಹಾಕಲಾಗುತ್ತಿದೆ. ವ್ಯಾಕ್ಸಿನೇಷನ್ ಆಗಿರುವವರಿಗೆ ಇದೀಗ ಪಾಸಿಟಿವ್ ಕಂಡು ಬಂದಿದೆ. ಇಬ್ಬರನ್ನು ಕೇರಳ ಹಾಗೂ ಒಬ್ಬರನ್ನು ಮುಂಬೈಗೆ ಕಳಿಸಲಾಗಿದೆ.
ಆನೇಕಲ್ ಸುತ್ತಮುತ್ತಲಿನ ಕಡೆ ಬೋರ್ಡಿಂಗ್ ಶಾಲೆಗಳು ಹೆಚ್ಚಿವೆ. ಜಿಲ್ಲಾದ್ಯಂತ ಇರುವ ಎಲ್ಲ ಬೋರ್ಡಿಂಗ್ ಶಾಲೆಗಳು , ಹಾಸ್ಟೆಲ್ಗಳಲ್ಲಿ ಹೆಲ್ತ್ ಚೆಕ್‌ಅಪ್‌ಗೆ ಸೂಚಿಸಲಾಗಿದೆ. ಎಲ್ಲೆಡೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿಗಾವಹಿಸಲು ಸೂಚಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಟ್ಟು ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಅನುವು : ಕೋವಿಡ್ ಚೆಕ್‌ಅಪ್ ಮಾಡಿಸಿ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರವವರಿಗೆ ಕೊರೊನಾ ಪರೀಕ್ಷೆ ನಂತರ ಅಗತ್ಯ ಕ್ರಮ ವಿಚಾರವಾಗಿ ಇಂದು ಸಂಜೆ 4 ಗಂಟೆಗೆ ಸಿಎಂ ಸಭೆ ಕರೆದಿದ್ದಾರೆ. ಸಭೆ ನಂತರ ಇನ್ನಷ್ಟು ಮಾಹಿತಿ ನೀಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.