ಬೆಂಗಳೂರು: ಇನ್ಮುಂದೆ ಕೆಲವೇ ಗಂಟೆಯಲ್ಲಿ ರೂಪಾಂತರಿ ಒಮಿಕ್ರಾನ್ ಇದೆಯೋ, ಇಲ್ಲವೋ ಎಂಬುದು ಪತ್ತೆಯಾಗಲಿದೆ. ಹೌದು, ರೂಪಾಂತರಿ ಒಮಿಕ್ರಾನ್ ಪತ್ತೆಗೆ ವಿಶೇಷ ಆರ್ಟಿ-ಪಿಸಿಆರ್ ಕಿಟ್ ತಯಾರಾಗಿದೆ.
ದಿನಕ್ಕೊಂದು ಸ್ವರೂಪ ತಾಳುತ್ತಿರುವ ಡೆಡ್ಲಿ ವೈರಸ್ 30ಕ್ಕೂ ಹೆಚ್ಚು ಮ್ಯೂಟೇಷನ್ ಹೊಂದಿದೆ. ಹೀಗಾಗಿಯೇ ಒಮಿಕ್ರಾನ್ ಬಗ್ಗೆ ವೇರಿಯೆಂಟ್ ಆಫ್ ಕನ್ಸರ್ನ್ (variant of concern) ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿದಾಗಲೂ ಈ ಒಮಿಕ್ರಾನ್ ಸೋಂಕು ಪತ್ತೆಯಾಗುತ್ತಿಲ್ಲ. ಇದಕ್ಕಾಗಿ ಸದ್ಯ ಜಿನೋಮಿಕ್ ಸೀಕ್ವೆನ್ಸ್ ಮೊರೆ ಹೋಗಬೇಕಿದೆ.
ಅಧಿಕ ಸಮಯ ತೆಗೆದುಕೊಳ್ಳುವ ಜಿನೋಮಿಕ್ ಸೀಕ್ವೆನ್ಸ್:
ಕೊರೊನಾ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ರಕ್ತದ ಮಾದರಿಯನ್ನು ಹಾಕಿದ ಕೂಡಲೇ ಫಲಿತಾಂಶ ಬಂದು ಬಿಡುತ್ತದೆ. ಆದರೆ ಜಿನೋಮಿಕ್ ಟೆಸ್ಟ್ನಲ್ಲಿ ಅಷ್ಟು ಸುಲಭವಿಲ್ಲ. ಸ್ಯಾಂಪಲ್ಸ್ ಸಂಗ್ರಹದಿಂದ ಹಿಡಿದು ಲ್ಯಾಬ್ಗೆ ಕಳುಹಿಸುವವರೆಗೂ ಕ್ವಾಲಿಟಿ ಚೆಕ್ ಮಾಡಬೇಕಾಗುತ್ತದೆ. ಸೀಕ್ವೆನ್ಸ್ಗೆ ಕಳುಹಿಸಿದಾಗ ಭಾಗಶಃ ವರದಿ ಸಿದ್ಧವಿರುತ್ತದೆ. ಆದರೆ ಆ ವರದಿ ಅಂತಿಮವಾಗಿ ಡಿಎನ್ಎ ಲೈಬ್ರರಿ ಪ್ರಿಪ್ರೇನ್ಗೆ ಕೆಲ ಸಮಯ ತೆಗೆದುಕೊಳ್ಳುತ್ತದೆ. ಇದು ಎರಡು ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ.
ಬಳಿಕ ಬಯೋ ಇನ್ಫಾರ್ಮ್ಯಾಟಿಕ್ (bioinformatic) ಆಗಿರುವ ಕಂಪ್ಯೂಟರ್ ಅನಾಲಿಸಿಸ್ಗೆ ಹೋದಾಗ ಅದು ಲಕ್ಷಾಂತರ ಜೀನ್ಗಳನ್ನು ಪರಾಮರ್ಶಿಸಲಿದೆ. ನಂತರ ಪ್ರೂಫ್ ರೀಡ್ ಮಾಡಿದ ಬಳಿಕವೇ ಒಮಿಕ್ರಾನ್ ಇದೆಯೋ ಇಲ್ಲವೋ ಎಂದು ಜಿನೋಮ್ ಸೀಕ್ವೆನ್ಸಿಂಗ್ನಲ್ಲಿ ತಿಳಿಯಲು ಸಾಧ್ಯ. ಇದು ಹತ್ತಾರು ಹಂತಗಳನ್ನು ದಾಟಿ ಬರಲಿದ್ದು, ಹೆಚ್ಚಿನ ಸಮಯ ಹಿಡಿಯಲಿದೆ.
ಹೀಗೆ ಅಧಿಕ ಸಮಯ ತೆಗೆದುಕೊಳ್ಳುತ್ತಿರುವುದು ರೋಗ ಹರಡುವಿಕೆಗೆ ದಾರಿ ಮಾಡಿಕೊಟ್ಟಂತಾಗಿತ್ತು. ಕೊರೊನಾ ಸೋಂಕಿನಂತೆ ರೂಪಾಂತರಿ ಒಮಿಕ್ರಾನ್ ಸುಲಭವಾಗಿ ಪತ್ತೆಯಾಗದೇ, ಜಿನೋಮಿಕ್ ಸೀಕ್ವೆನ್ಸ್ ವರದಿ ಬರುವವರೆಗೂ ಕಾಯಬೇಕಾಗಿತ್ತು. ಆದರೆ ಇನ್ಮುಂದೆ ಕೆಲವೇ ಗಂಟೆಯಲ್ಲಿ ರೂಪಾಂತರಿ ಒಮಿಕ್ರಾನ್ ಇದೆಯೋ, ಇಲ್ಲವೋ ಎಂಬುದು ಪತ್ತೆಯಾಗಲಿದೆ.
ವಿಶೇಷ ಆರ್ಟಿ-ಪಿಸಿಆರ್ ಕಿಟ್:
ಹೌದು, ರೂಪಾಂತರಿ ಒಮಿಕ್ರಾನ್ ಪತ್ತೆಗೆ ವಿಶೇಷ ಆರ್ಟಿ-ಪಿಸಿಆರ್ ಕಿಟ್ ತಯಾರಾಗಿದೆ. ಕೊರೊನಾ ರೀತಿಯೇ ಒಮಿಕ್ರಾನ್ ಕೇಸ್ಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ತಿಂಗಳೊಳಗೆ ನೂತನ ಒಮಿಕ್ರಾನ್ ಆರ್ಟಿ ಪಿಸಿಆರ್ ಟೆಸ್ಟ್ ಕಿಟ್ ಆಗಮಿಸಲಿದೆ. ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿರುವ ತಜ್ಞ ವೈದ್ಯ ಡಾ. ಮಂಜುನಾಥ್ ಖಚಿತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಒಮಿಕ್ರಾನ್ ಪತ್ತೆಗೆ ನೂತನ ಆರ್ಟಿಪಿಸಿಆರ್ ಸಾಧನ ರೆಡಿ ಇದ್ದು, ಈಗಾಗಲೇ 15 ಸಾವಿರ ಕಿಟ್ ತಯಾರಿ ಕೂಡ ಆಗಿದೆ. ನಿಮ್ಹಾನ್ಸ್ ಆಸ್ಪತ್ರೆಯ ವೈರಾಲಜಿ ತಜ್ಞ ಡಾ. ವಿ. ರವಿ ಸದಸ್ಯರಾಗಿರುವ ತಂಡದಿಂದ ಇದು ತಯಾರಾಗಿದೆ. 2-3 ವಾರದೊಳಗೆ ಸರ್ಕಾರದಿಂದ ಅಧಿಕೃತ ಒಪ್ಪಿಗೆ ಪಡೆದು ಬರಲಿದೆ ಎಂದರು.
ಈ ಮೊದಲು ಆರ್ಟಿಪಿಸಿಆರ್ ಟೆಸ್ಟ್ನಲ್ಲಿ N ಜೀನ್, R1 ಜೀನ್ ಪರೀಕ್ಷೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಬಂದಿರುವ ಆರ್ಟಿಪಿಸಿಆರ್ ಕಿಟ್ನಲ್ಲಿ S ಜೀನ್ ಟೆಸ್ಟ್ ಮಾಡಬಹುದು. S ಜೀನ್ ಅನುಮಾನದ ಹಿನ್ನೆಲೆ ಕೋವಿಡ್ ಸೋಂಕಿತರ ಜಿನೋಮಿಕ್ ಸೀಕ್ವೆನ್ಸ್ಗೆ ಕಳುಹಿಸಲಾಗುತ್ತದೆ. ಆಗ ಮಾತ್ರ ಒಮಿಕ್ರಾನ್ ಸೋಂಕಿತರ ಪತ್ತೆ ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ಮೊದಲು ಒಮಿಕ್ರಾನ್ ಇದ್ರೂ ಕೂಡ ಪತ್ತೆಯಾಗುವುದು ತಡವಾಗುತ್ತಿತ್ತು. ಜಿನೋಮಿಕ್ ಸೀಕ್ವೆನ್ಸ್ ವರದಿಗಾಗಿ ವಾರಗಟ್ಟಲೇ ಕಾಯಬೇಕಾಗಿತ್ತು. ಇದರಿಂದ ಸೋಂಕು ಸಮುದಾಯಕ್ಕೆ ಹೆಚ್ಚು ಹರಡುವ ಅಪಾಯವಿತ್ತು. ಇದೀಗ ಈ ನೂತನ ಆರ್ಟಿ ಪಿಸಿಆರ್ ಕಿಟ್ ನಿಂದ ಬೇಗ ಸೋಂಕು ಪತ್ತೆ ಹಚ್ಚಬಹುದು ಅಂತ ಡಾ. ಮಂಜುನಾಥ್ ತಿಳಿಸಿದ್ದಾರೆ.