ಬೆಂಗಳೂರು: ಮಂಗಳೂರು ಸೇರಿದಂತೆ ಕೊಂಕಣ ರೈಲು ಮಾರ್ಗದ 26 ನಿಲ್ದಾಣಗಳಲ್ಲಿ ದಿವ್ಯಾಂಗರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವಂತೆ ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕಾರವಾರದ ಜಾರ್ಜ್ ಫರ್ನಾಂಡೀಸ್, ವಿ.ಬಿ.ನಾಯಕ್ ಮತ್ತಿತರರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ನ್ಯಾ. ಸತೀಶ್ ಚಂದ್ರ ಶರ್ಮಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲ ಆರ್.ಜಿ ಕೊಲ್ಲೆ 2013ರಲ್ಲಿ ಅಂದಿನ ರೈಲ್ವೆ ಸಚಿವರು ಮಂಗಳೂರು ಮತ್ತು ತೋಕೂರು ನಿಲ್ದಾಣವನ್ನು ನೈರುತ್ಯ ರೈಲ್ವೆ ವಲಯಕ್ಕೆ ಹಸ್ತಾಂತರ ಮಾಡುವುದಾಗಿ ಘೋಷಿಸಿದ್ದರು. ಆದರೆ ಆ ಕುರಿತು ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ. ಈ ಕುರಿತು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಮಂಗಳೂರು ಸೇರಿದಂತೆ ಕೊಂಕಣ ರೈಲು ಮಾರ್ಗದ 26 ನಿಲ್ದಾಣಗಳಲ್ಲಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ನಿಲ್ದಾಣದಲ್ಲಿ ಮೇಲುಸೇತುವೆ ಇಲ್ಲ, ಫ್ಲಾಟ್ ಫಾರ್ಮ್‌ಗಳು ಅನುಕೂಲಕರವಿಲ್ಲ, ಪ್ರಯಾಣಿಕರು ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಸ್ಥಳಾವಕಾಶವಿಲ್ಲ ಎಂಬುದು ಸೇರಿದಂತೆ ಯಾವ ಸೌಲಭ್ಯಗಳೂ ಇಲ್ಲ. ಇದರಿಂದಾಗಿ ದಿನನಿತ್ಯ ಸಂಚರಿಸುವ ಸಾವಿರಾರು ದಿವ್ಯಾಂಗರು ಹಾಗೂ ಹಿರಿಯ ನಾಗರಿಕರು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ.
760 ಕಿ.ಮೀ ಉದ್ದದ ಕೊಂಕಣ ಮಾರ್ಗ ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ಮಂಗಳೂರಿನವರೆಗೆ ಹರಡಿದೆ. ಮಂಗಳೂರು ಜಂಕ್ಷನ್ ನಿಂದ ಕಾರವಾರ ನಿಲ್ದಾಣದವರೆಗೆ 6 ಪ್ರಮುಖ ಹಾಗೂ 19 ಸಣ್ಣ ರೈಲು ನಿಲ್ದಾಣಗಳಿದ್ದು, ಅವುಗಳಿಗೆ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಇದರಿಂದ ಪ್ರಯಾಣಿಕರು ವಿಶೇಷವಾಗಿ ದಿವ್ಯಾಂಗರು ಹಾಗೂ ಹಿರಿಯ ನಾಗರಕರು ದಿನನಿತ್ಯ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದರು.
ಕೆಲ ಕಾಲ ವಾದ ಆಲಿಸಿದ ಪೀಠ, ರೈಲ್ವೆ ಸಚಿವಾಲಯ, ಕೊಂಕಣ ರೈಲ್ವೆ ನಿಗಮದ ವ್ಯವಸ್ಥಾಪಕ ನಿರ್ದೇಶಕ, ನೈಖುತ್ಯ ವಲಯದ ಜನರಲ್ ಮ್ಯಾನೇಜರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಹಾಗೆಯೇ, ಮೊದಲನೇ ಬೇಡಿಕೆಯನ್ನು ಪರಿಗಣಿಸಲಾಗದು, ಆದರೆ ರೈಲು ನಿಲ್ದಾಣಗಳಲ್ಲಿ ಮೂಲಸೌಕರ್ಯ ವೃದ್ಧಿ ಕುರಿತು ಪ್ರತಿವಾದಿಗಳಿಂದ ವಿವರಣೆ ಕೇಳಲಾಗುವುದು ಎಂದು ತಿಳಿಸಿ, ವಿಚಾರಣೆಯ ಮುಂದೂಡಿತು.