ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆ ಬಲಗೊಳಿಸುವ ನಿಟ್ಟಿನಲ್ಲಿ ನಾಳೆ ವಿಧಾನಸೌಧದಲ್ಲಿ ಆಡಳಿತ- ಪ್ರತಿಪಕ್ಷದ ಹಿರಿಯ ಸಂಸದೀಯ ನಾಯಕರ ಸಭೆ ನಡೆಸುತ್ತಿದ್ದೇನೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ನಾನು ಆಡಳಿತ- ಪ್ರತಿಪಕ್ಷದ ಹಿರಿಯ ಸಂಸದೀಯ ಗಣ್ಯರ ಜತೆ ವಿಧಾನಸೌಧದ ಕೊಠಡಿ 106 ರಲ್ಲಿ ಸಭೆ ಕರೆದಿದ್ದೇನೆ. ಪಕ್ಷಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಕೈಗೊಳ್ಳುವ ಕ್ರಮದ ಬಗ್ಗೆ ಸುಧಾರಣೆ ಮಾಡಬೇಕಿದ್ದು, ಅದಕ್ಕಾಗಿ ಜೂ.10 ರ ಒಳಗೆ ಅಭಿಪ್ರಾಯ ತಿಳಿಸಲು ತಜ್ಞರಿಗೆ ಸೂಚಿಸಿದ್ದೇನೆ. ನಾಳಿನ ಸಭೆಯಲ್ಲಿ ಕೂಡ ಪಕ್ಷಾಂತರ ನಿಷೇಧ ಕಾಯ್ದೆ ಸುಧಾರಣೆ ವಿಚಾರದಲ್ಲಿ ಗಂಭೀರ ಚರ್ಚೆ ನಡೆಸುತ್ತೇನೆ ಎಂದರು.
ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಈ ಕುರಿತು ವಿವರ ಸಲ್ಲಿಸಿದ್ದು, 25 ಹಿರಿಯ ರಾಜಕೀಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೊರೊನಾ ಹಿನ್ನೆಲೆ ವಿಧಾನಸಭೆ ಅಧಿವೇಶನ ಮಾರ್ಚ್ನಲ್ಲಿ ನಾಲ್ಕು ದಿನ ಮುನ್ನವೇ ಮುಕ್ತಾಯವಾಗಿದೆ. ಆದರೂ ಅಧಿವೇಶನ ಚೆನ್ನಾಗಿ ನಡೆದಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಲಾಕ್ಡೌನ್ನಿಂದ ತೊಂದರೆ ಉಂಟಾಗಿದ್ದರೂ ಸಹ ಜನರು ಪಾಲಿಸಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ಯಶಸ್ಸಿಯಾಗಿದ್ದಕ್ಕೆ ಜನರ ಪಾತ್ರ ಹೆಚ್ಚಿದೆ. ಲಾಕ್ಡೌನ್ನಿಂದಾಗಿ ಜನರು ಸಮಸ್ಯೆಗೆ ಒಳಗಾಗಿದ್ದು ಈಗ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದರು.
ಇನ್ನು ಪಕ್ಷಾಂತರ ನಿಷೇಧ ಕಾಯ್ದೆ ಸಂವಿಧಾನದ 1 ನೇ ಅನುಚ್ಛೇದ, ಪಕ್ಷಾಂತರ ನಿಷೇಧ ಕಾಯ್ದೆ ಕುರಿತು 60 ರ ದಶಕದಿಂದಲೂ ಚರ್ಚೆ ನಡೆಯುತ್ತಿದೆ. ಬಂದಿರುವ ಸರ್ಕಾರಗಳು ಆಯಾ ಕಾಲಕ್ಕೆ ತಕ್ಕಂತೆ ತಮ್ಮದೇ ಆದ ಕ್ರಮ ಕೈಗೊಂಡಿದ್ದಾರೆ. ಜನರ ಆಶಯಕ್ಕೆ ತಕ್ಕಂತೆ ಕಾನೂನು ರೂಪಿಸಬೇಕು ಎಂದು ಹಲವರು ಶ್ರಮ ಪಟ್ಟು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಆದರೂ ಈ ಪಿಡುಗು ಮುಂದುವರಿದೆ. ಈ ಕುರಿತು ಸಾಕಷ್ಟು ಚರ್ಚೆ ಸಹ ನಡೆದಿದೆ. ಶೆಡ್ಯೂಲ್ 10 ಬಲಗೊಳಿಸಲು ಯಾವ ಕ್ರಮ ಕೈಗೊಳ್ಳಬೇಕೆಂದು ಚರ್ಚೆ ನಡೆಯುತ್ತಿದೆ. ಸುಧಾರಣೆಗಾಗಿ ಸಭಾಧ್ಯಕ್ಷರ ಸಮಿತಿ ರಚಿಸಿ, ನಿರಂತರವಾಗಿ ಸಭೆ ನಡೆಯುತ್ತಿದೆ. ನಾನು ಉಗಾಂಡ ದೇಶದಲ್ಲಿ ಕೂಡ ಸಭೆಯಲ್ಲಿ ಭಾಗವಹಿಸಿದ್ದೆ. ಆಸ್ಸಾಂ, ದೆಹಲಿ ಮತ್ತಿತರ ಕಡೆ ನಡೆದ ಸಭೆಯಲ್ಲೂ ಭಾಗವಹಿಸಿದ್ದೇನೆ. ರಾಜಸ್ಥಾನದ ಜಯಪುರದಲ್ಲಿ ಈ ಕುರಿತು ನಮ್ಮದು ಒಂದು ಸಭೆ ಆಗಿದೆ. ಇದೀಗ ಮತ್ತೆ ಪಕ್ಷಾಂತರ ಚಟುವಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಲಹೆ ಪಡೆಯಲು ಮುಂದಾಗಿದ್ದೇನೆ ಎಂದರು.