ಬೆಂಗಳೂರು : ಹಣ ಗಳಿಸುವ ಉದ್ದೇಶವನ್ನು ಕಲಿಸುವ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯ ಹೊರತಾಗಿ, ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಿಗೊಳಿಸುವ, ಜೀವನಕ್ಕೆ ಸಾರ್ಥಕತೆಯನ್ನು ನೀಡುವಂತಹ ಶಕ್ತಿಯನ್ನು ಹೊಂದಿರುವ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸಿದ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಹೆಚ್ಚಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಗರದಲ್ಲಿಂದು ಅಭಿಪ್ರಾಯಪಟ್ಟಿದ್ದಾರೆ.
ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಅಳವಡಿಸಬೇಕು ಎನ್ನುವಂತಹ ವಿಷಯದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಹಣವನ್ನು ಗಳಿಸುವ ಉದ್ದೇಶದ ಬ್ರಿಟಿಷ್ ಪದ್ಧತಿಯಾಗಿದೆ. ಆದರೆ, ಭಗವದ್ಗೀತೆಯಲ್ಲಿ ಯಾವ ಜಾತಿ, ಉಪಜಾತಿ, ಆ ರಾಜ್ಯ, ಈ ಭಾಷೆ ಆ ಗಡಿ, ಈ ಗಡಿ ಎನ್ನುವ ತಾರತಮ್ಯ ಇರಲಿಲ್ಲ.
ಯಾವ ಬೇಧಭಾವ ಕೂಡ ಇಲ್ಲ. ಸೃಷ್ಟಿಯ ಸತ್ಯ ಏನಿದೆಯೋ ಅದು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಸೃಷ್ಟಿಯ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಹಾಗಾಗಿ, ಅದನ್ನು ತಿಳಿದುಕೊಳ್ಳುವ ಶಿಕ್ಷಣ ಭಗವದ್ಗೀತೆಯಲ್ಲಿದೆ. ಭಗವದ್ಗೀತೆಯ ಶಿಕ್ಷಣವನ್ನು ನಾವು ಕಲಿಸಿದರೆ ತಪ್ಪಾಗಲಾರದು ಎನ್ನುವುದು ನನ್ನ ನಂಬಿಕೆ ಹಾಗೂ ಅದನ್ನು ಕಲಿಸಬೇಕೆಂಬ ಆಗ್ರಹ ನನ್ನದಾಗಿದೆ ಎಂದು ಹೇಳಿದ್ದಾರೆ.
ಶಿಕ್ಷಣ ಮಂತ್ರಿಯಾಗಿದ್ದಾಗ ಭಗವದ್ಗೀತಾ ಅಭಿಯಾನ ನಡೆಯಿತು. ಸ್ವರ್ಣವಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಂತಹ ಅಭಿಯಾನದಲ್ಲಿ ರಾಜ್ಯದ 20 ಲಕ್ಷ ವಿದ್ಯಾರ್ಥಿಗಳು ಭಗವದ್ಗೀತೆ ಕಲಿಯುವ ಅವಕಾಶವನ್ನು ನಾನು ಶಿಕ್ಷಣ ಮಂತ್ರಿಯಾಗಿ ಮಾಡಿಕೊಟ್ಟಿದ್ದೇನೆ. ಇಂದು ಅದು ಕಡ್ಡಾಯವಾಗಿ ಶಿಕ್ಷಣದಲ್ಲಿ ಅಳವಡಿಕೆ ಆಗಬೇಕು ಎನ್ನುವ ಚರ್ಚೆ ನಡೆಯುತ್ತಿದ್ದು, ಅದು ಬರಲಿ ಎಂದು ಆಶಿಸೋಣ.
ಭಗವದ್ಗೀತೆ ಶಿಕ್ಷಣದ ಭಾಗ ಆಗಬೇಕು. ಏಕೆಂದರೆ, ಅದರಿಂದಾಗಿ ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುತ್ತದೆ. ಜೀವನದ ಸಾರ್ಥಕತೆಯನ್ನು ಅದು ನೀಡುತ್ತದೆ. ಹಣಗಳಿಸುವ ಶಿಕ್ಷಣ ವ್ಯವಸ್ಥೆಯಿಂದ, ನಮ್ಮ ಜೀವನ ಸಾರ್ಥಕಗೊಳಿಸುವ ಶಿಕ್ಷಣ ವ್ಯವಸ್ಥೆಯ ಕಡೆಗೆ ಹೋಗಲು ಭಗವದ್ಗೀತೆಯಂತಹ ಶಿಕ್ಷಣ ಬೇಕು.
ನಾವು ಹಣಗಳಿಸುವ ವ್ಯವಸ್ಥೆಯಿಂದ ಪರಿವರ್ತನೆ ತರಬೇಕು ಎನ್ನುವುದಾದರೆ ಆಧ್ಯಾತ್ಮಿಕ ತಳಹದಿಯ ಶಿಕ್ಷಣ ನಮಗೆ ಅಗತ್ಯ ಇದೆ. ಆಧ್ಯಾತ್ಮಿಕ ತಳಹದಿಯ ಶಿಕ್ಷಣ ಭಗವದ್ಗೀತೆಯಂತಹ ಶಿಕ್ಷಣದಲ್ಲಿ ಸಿಗುತ್ತದೆ.
ಹಣ ಮುಖ್ಯ. ಆದರೆ, ಹಣವನ್ನು ಹೇಗಾದರೂ ಗಳಿಸಲೇಬೇಕು ಎನ್ನುವಂತಹ ಹಪಾಹಪಿತನ, ದುರಾಸೆಯನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ. ಯಾವ ಮಾರ್ಗದಿಂದಲಾದರೂ ಹಣ ಗಳಿಸಬೇಕು ಎನ್ನುವ ದುರಾಸೆ ಹೆಚ್ಚಾಗಿದೆ. ಆಸೆ ಇರಬೇಕು ನಿಜ. ಆದರೆ, ದುರಾಸೆ ಶುರುವಾದರೆ ವ್ಯವಸ್ಥೆಯಲ್ಲಿನ ಶಿಥಿಲತೆ ಶುರುವಾಗುತ್ತದೆ. ನಮಗೆ ಬೇಕಾಗಿರುವುದು ಧರ್ಮಮಾರ್ಗದಿಂದ ಗಳಿಸಿದಂತ ಹಣ ಮಾತ್ರ. ಈ ಹಿನ್ನೆಲೆಯಲ್ಲಿ ನಾವು ಆಧ್ಯಾತ್ಮಿಕ ತಳಹದಿಯ ಶಿಕ್ಷಣವನ್ನು ಅಳವಡಿಸಿಕೊಳ್ಳುವುದರತ್ತ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಕಾಗೇರಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಜಾರಿಗೆ ಯಾರ ಅಪ್ಪಣೆಯೂ ಬೇಕಿಲ್ಲ.. ಪ್ರಮೋದ್ ಮುತಾಲಿಕ್