ಬೆಂಗಳೂರು: ರೇಷ್ಮೆ ಮಾರುಕಟ್ಟೆಯಲ್ಲಿ ಲೂಟಿ ಮಾಡುವ ದಂಧೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಈ ಹಿಂದೆ ನಾನು ರೇಷ್ಮೆ ಸಚಿವನಾಗಿದ್ದಾಗಲೇ ಇ- ಪೇಮೆಂಟ್ಗೆ ಸಿದ್ಧತೆ ಮಾಡಲಾಗಿತ್ತು. ಈವರೆಗೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಯಾಕೆ? ಎಂದು ರೇಷ್ಮೆ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸಂಜೆ ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಅಧಿಕಾರಿಗಳ ವಿಳಂಬ ನೀತಿಗೆ ಅಕ್ರೋಶ ವ್ಯಕ್ತಪಡಿಸಿದರು. ಇ-ಪೇಮೆಂಟ್ ತಕ್ಷಣ ಆರಂಭವಾಗಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಿವೃತ್ತಿ ಪಡೆಯಿರಿ:
ಕೆಲಸ ಮಾಡುವ ಮನಸ್ಸಿಲ್ಲದಿದ್ದರೆ ಸ್ವಯಂ ನಿವೃತ್ತಿ ಪಡೆಯಿರಿ. ಕೆಲಸ ಮಾಡಲು ಆಸಕ್ತಿ ಇರುವ ಸಾಕಷ್ಟು ಜನರಿದ್ದಾರೆ. ಹಣ ಮಾಡಲು ಸಚಿವನಾಗಿ ಬಂದಿಲ್ಲ. ವರ್ಷದ ಹಿಂದೆ ಹೇಳಿದ್ದ ಕೆಲಸ ಇನ್ನೂ ಜಾರಿಗೆ ತಂದಿಲ್ಲ. ಏನು ಮಾಡುತ್ತಿದ್ದೀರಿ ಎಂದು ಗರಂ ಆದರು.
ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು:
ಇ-ಟೆಂಡರ್ ಶೇ. 100 ಆಗಬೇಕು. ಅದೇ ರೀತಿ ಇ- ಪೇಮೆಂಟ್ ಕೂಡ ಶೇ. 100 ಆಗಬೇಕು. ಕೆಲವು ಮಾರುಕಟ್ಟೆಯಲ್ಲಿ ಇ- ಪೇಮೆಂಟ್ ಇದ್ದರೂ, ಪರ್ಯಾಯವಾಗಿ ನಗದು ವ್ಯವಹಾರ ಕೂಡ ಇದೆ. ಒಂದು ರೂಪಾಯಿ ವ್ಯವಹಾರ ಕೂಡ ನಗದು ರೂಪದಲ್ಲಿ ಆಗಬಾರದು.
ಎಲ್ಲ ರೇಷ್ಮೆ ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಕೆ ಆಗಬೇಕು. ಹಾಗೂ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆ ಆಗಬೇಕು. ಸಿಲ್ಕ್ & ಮಿಲ್ಕ್ ರೈತರಿಗೆ ಜೀವನಾಧಾರವಾಗಿದೆ. ಹೆಣ್ಣುಮಕ್ಕಳು ಶ್ರಮವಹಿಸಿ ರೇಷ್ಮೆ ಬೆಳೆಯುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಶೇ.50 ರಷ್ಟು ರೇಷ್ಮೆ ಉತ್ಪಾದನೆ ನಮ್ಮ ಗುರಿ :
ದೇಶದಲ್ಲಿ 23,820 ಮೆ.ಟನ್ ರೇಷ್ಮೆ ಉತ್ಪಾದನೆ ಇದೆ. ಆ ಪೈಕಿ ರಾಜ್ಯದಲ್ಲಿಯೇ 11,292 ಮೆ.ಟನ್ ರೇಷ್ಮೆ ಉತ್ಪಾದನೆ ಆಗುತ್ತಿದೆ. ದೇಶದ ಒಟ್ಟು ಉತ್ಪಾದನೆಯ ಶೇ. 47 ರಷ್ಟು ಉತ್ಪಾದನೆ ರಾಜ್ಯದಲ್ಲಿ ಆಗುತ್ತಿದೆ. ಇದು ಶೇ. 50ರಷ್ಟಕ್ಕೆ ಏರಬೇಕು. ಒಂದು ವರ್ಷದಲ್ಲಿ ಈ ಗುರಿಯನ್ನು ತಲುಪಬೇಕು. ರೇಷ್ಮೆ ಬೆಳೆಯುವ ರೈತರಿಗೆ ಎಲ್ಲ ರೀತಿಯ ಸಹಕಾರ ನೀಡಿ ಈ ಗುರಿ ಮುಟ್ಟುವಂತೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಸಿ ಟಿ ರವಿ ದೆಹಲಿಯಲ್ಲಿ ಅಡ್ಡ ಸಿಕ್ಕವರನ್ನ ಕಚ್ಚುತ್ತಾ ಬಂದು ಇದೀಗ ನನ್ನನ್ನು ಕಚ್ಚಿದ್ದಾರೆ : ಶಾಸಕ ಎಂ ಪಿ ಕುಮಾರಸ್ವಾಮಿ
ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಷನ್ನವರು ತಿಂಗಳಿಗೆ 500 ಕೆ.ಜಿ. ಯಷ್ಟು ರೇಷ್ಮೆಯನ್ನು ಹೊರಗಡೆಯಿಂದ ಖರೀದಿಸುತ್ತಿದ್ದಾರೆ. ಇನ್ನು ಮುಂದೆ ಇಲಾಖೆಯ ಮಾರುಕಟ್ಟೆಯಿಂದಲೇ ಖರೀದಿಸಬೇಕು. ಗುಣಮಟ್ಟದ ರೇಷ್ಮೆ ನಮ್ಮಲ್ಲಿಯೇ ಸಿಗುತ್ತದೆ. ಕಡ್ಡಾಯವಾಗಿ ಇಲಾಖೆಯಿಂದಲೇ ಖರೀದಿಸಬೇಕು ಎಂದು ಸಚಿವರು ಸೂಚಿಸಿದರು.
ಪ್ರತ್ಯೇಕ ಆ್ಯಪ್ ರಚನೆ:
ರೇಷ್ಮೆ ಇಲಾಖೆ ಯೋಜನೆಗಳ ವಿವರ ರೈತರಿಗೆ ಸಿಗುವಂತೆ ಮಾಡಲು ಪ್ರತ್ಯೇಕ ಆ್ಯಪ್ ರಚನೆ ಮಾಡಬೇಕು. ಏರ್ಪೋರ್ಟ್ನಂತಹ ಪ್ರಮುಖ ಸ್ಥಳಗಳಲ್ಲಿ ರೇಷ್ಮೆ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಪ್ರತಿ ಜಿಲ್ಲೆಗಳಿಗೆ ಭೇಟಿ ಕೊಡಬೇಕು. ಈ ತಿಂಗಳ 24ರೊಳಗೆ ಮಾಹಿತಿ ಕೊಡಬೇಕು. 25ರಂದು ಜಿಲ್ಲಾವಾರು ಪ್ರಗತಿ ಪರಿಶೀಲನೆ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು. ನವದೆಹಲಿ, ಏರ್ಪೋರ್ಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರೇಷ್ಮೆ ಮಾರುಕಟ್ಟೆ ಮಳಿಗೆ ತೆರೆಯಲು ತೀರ್ಮಾನಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ತಿಳಿಸಿದರು.