ಬೆಂಗಳೂರು: ರಾಜ್ಯ ಸರ್ಕಾರ ಕೂಡಲೇ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಟ್ವೀಟ್ ಮಾಡುವ ಜತೆಗೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿರುವ ಅವರು, ಶೂ, ಸಾಕ್ಸ್ ಬಗ್ಗೆ ಸಚಿವರ ಹೇಳಿಕೆ ವಿಚಾರ ಪ್ರಸ್ತಾಪಿಸಿ, ನಾವು ಬಡಮಕ್ಕಳಿಗೆ ಅನುಕೂಲವಾಗಲೆಂದು ಸಾಕ್ಸ್ , ಶೂ ಕೊಡುತ್ತಿದ್ದೆವು. ಆದರೆ ಇವರು ನಿಲ್ಲಿಸಲು ಹೊರಟರು. ನಾವು ಒತ್ತಾಯ ಮಾಡಿದ ಮೇಲೆ ಕೊಡುತ್ತೇವೆ ಎಂದರು. ಶಾಲೆಗಳು ಆರಂಭವಾಗಿವೆ. ಶೂ, ಸಮವಸ್ತ್ರ ಕೊಡಬೇಕಿತ್ತು. ಆದರೆ ಇನ್ನೂ ಯಾವುದನ್ನೂ ಕೊಟ್ಟಿಲ್ಲ. ತಕ್ಷಣ ವಿತರಣೆ ಕಾರ್ಯ ಆರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಮರನಾಥ ಮೇಘಸ್ಫೋಟ ವಿಚಾರವಾಗಿ ಮಾತನಾಡಿದ ಅವರು, ಅವಘಡದಲ್ಲಿ ಸಿಲುಕಿದವರನ್ನ ಸುರಕ್ಷಿತವಾಗಿ ಕರೆತರಬೇಕು ಎಂದರು. ರಾಜ್ಯದಲ್ಲಿ ಮಳೆಯಿಂದ ಹಾನಿ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಉಸ್ತುವಾರಿಗಳು ಜಿಲ್ಲೆಗೆ ಹೋಗುತ್ತಿಲ್ಲ. ಜನರ ಕಷ್ಟ ಸುಖಗಳನ್ನ ಕೇಳಬೇಕಲ್ಲ. ಇಲ್ಲಿ ಬರಿ ಮೀಟಿಂಗ್ ಮಾಡಿದ್ರೆ ಸಾಕಾ?, ಮುಖ್ಯಮಂತ್ರಿಗಳು ಭೇಟಿ ನೀಡಬೇಕು. ನರೇಂದ್ರ ಮೋದಿ ಪರಿಹಾರ ಕೊಟ್ಟಿದ್ದಾರೇನ್ರಿ?. ಸಾವಿರಾರು ಕೋಟಿ ಕೊಟ್ಟಿದ್ದೇವೆ ಅಂತಾರಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ನಾಯಕರ ಭೇಟಿ: ಕೋಲಾರ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ವಿವಿಧ ಮುಖಂಡರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ನಗರಸಭೆ ಅಧ್ಯಕ್ಷೆ ಶ್ವೇತಾ ಅಂಬರೀಷ್, ಉಪಾಧ್ಯಕ್ಷ ಅಸ್ಲಂ, ಮಾಜಿ ಅಧ್ಯಕ್ಷ ಮುಬಾರಕ್ ಹಾಜರಿದ್ದರು.
2023 ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರ ನಗರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಇದಕ್ಕೆ ಅವರು ತಾತ್ವಿಕ ಒಪ್ಪಿಗೆ ಕೂಡ ನೀಡಿದ್ದಾರೆ ಎಂಬ ಮಾಹಿತಿ ಇದೆ. ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿರುವ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದು, ಸಿದ್ದರಾಮಯ್ಯಗೋಸ್ಕರ ತಮ್ಮ ಸ್ಥಾನವನ್ನು ಬಿಟ್ಟು ಕೊಡಲಿದ್ದಾರೆ ಎಂಬ ಮಾಹಿತಿ ಇದೆ.
ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿರುವ ಕೋಲಾರ ನಗರದಲ್ಲಿ ಬಿಜೆಪಿ ಸಾಕಷ್ಟು ದುರ್ಬಲವಾಗಿದೆ. ಈ ಹಿನ್ನೆಲೆ ತಮ್ಮ ಗೆಲುವು ಸುಲಭ ಎಂಬ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿದ್ದಾರೆ ಎನ್ನಲಾಗುತ್ತಿದೆ.