ಬೆಂಗಳೂರು: ಶಾಂತಿ, ಸುವ್ಯವಸ್ಥೆ, ನೆಮ್ಮದಿಯ ಬದುಕಿಗೂ ರಾಜ್ಯ ಮತ್ತು ದೇಶದ ಅಭಿವೃದ್ಧಿಗೂ ನೇರ ಸಂಬಂಧವಿದೆ. ಶಾಂತಿ, ಸುವ್ಯವಸ್ಥೆ ಇಲ್ಲದ ರಾಜ್ಯ, ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಇದನ್ನು ನಾವು ಜಗತ್ತಿನಾದ್ಯಂತ ಕಾಣಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ. ನಿಯಮ 69ರಡಿ ಚರ್ಚೆ ವೇಳೆ, ಬಹುತ್ವದ ರಾಷ್ಟ್ರಗಳಲ್ಲಿ ಶಾಂತಿ, ಸುವ್ಯವಸ್ಥೆ ಇದ್ದು ಅಂತಹ ರಾಷ್ಟ್ರಗಳು ಮುಂದುವರೆದಿವೆ. ಒಂದೇ ಧರ್ಮವನ್ನು ಹೊಂದಿರುವ ದೇಶಗಳು ಧರ್ಮವನ್ನು ರಾಜಕಾರಣದಲ್ಲಿ ಬೆರೆಸಿರುವ ಕಾರಣದಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿವೆ ಎಂದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಉದಾಹರಣೆಗೆ ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಫಿನ್ ಲ್ಯಾಂಡ್, ಫ್ರಾನ್ಸ್, ಜಪಾನ್ ದೇಶಗಳಲ್ಲಿ ಬಹುತ್ವ ಇದೆ, ಪ್ರಜಾಪ್ರಭುತ್ವ ವ್ಯವಸ್ಥೆ ಇದೆ, ಕಾನೂನು ಸುವ್ಯವಸ್ಥೆ ಗಟ್ಟಿಯಾಗಿದೆ. ಹೀಗಾಗಿ ಇವು ಅಭಿವೃದ್ಧಿ ಸಾಧಿಸಿವೆ. ಆಫ್ರಿಕಾದ ಹಲವು ದೇಶಗಳು, ಆಫ್ಘಾನಿಸ್ತಾನ, ಪಾಕಿಸ್ತಾನ ದೇಶಗಳಲ್ಲಿ ಒಂದೇ ಧರ್ಮವನ್ನು ಹೊಂದಿದ್ದರೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಕಾರಣದಿಂದ ಅಭಿವೃದ್ಧಿಯ ಹಾದಿಯಲ್ಲಿ ಹಿಂದುಳಿದಿವೆ ಎಂದು ಹೇಳಿದರು.
ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಭಾರತ ಬಹು ಸಂಸ್ಕೃತಿಯ ದೇಶ. ಇಲ್ಲಿ ಧಾರ್ಮಿಕ ವಿಷಯಗಳನ್ನು, ಸಮಾಜದ ಶಾಂತಿ ಕದಡುವ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದರೆ ದೇಶ ಅಭಿವೃದ್ಧಿ ಆಗಲ್ಲ. ರಾಜ್ಯದ ಉನ್ನತ ಶಿಕ್ಷಣದಲ್ಲಿ ಒಟ್ಟು ನೋಂದಣಿ ದರ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಹಿಂದಿದೆ. ದಕ್ಷಿಣ ಭಾರತದ ಸರಾಸರಿ ದರ ಶೇ.35 ಇದ್ದರೆ, ರಾಜ್ಯದ ದರ ಶೇ.32.2 ಇದೆ. ತಮಿಳುನಾಡು ಶೇ.51.4 ಇದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಿ ಉದ್ಯೋಗಾವಕಾಶಗಳು ಹೆಚ್ಚಾದರೆ ಆಗ ಜನರಲ್ಲಿ ಕೊಳ್ಳುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಇದರಿಂದ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಜಿಡಿಪಿ ಬೆಳವಣಿಗೆ ಹೊಂದಿ ದೇಶ, ರಾಜ್ಯ ಆರ್ಥಿಕವಾಗಿ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು.
ಬಿಜೆಪಿಯವರ ಸಾಧನೆಯಿದು..ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ಕೆಲ ತಿದ್ದುಪಡಿ ತಂದು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸಂವಿಧಾನದ ಮೂರನೆ ಭಾಗಕ್ಕೆ ಸೇರಿಸಿದರು. ಒಬ್ಬ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾದರೆ ಅದು ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಆದ ಅನ್ಯಾಯ. ಈ ಅನ್ಯಾಯದ ಪಾಪವನ್ನು ನಾವು ಹೊರಬೇಕಾಗುತ್ತದೆ ಎಂದರು. ನಮ್ಮ ಪಕ್ಷದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಬಳಿ ಕಳೆದ ಎರಡೂವರೆ ವರ್ಷಗಳಲ್ಲಿ ಸೃಷ್ಟಿಯಾದ ಉದ್ಯೋಗ ಮತ್ತು ಬಂದಿರುವ ಬಂಡವಾಳದ ಬಗ್ಗೆ ಮಾಹಿತಿ ಕೇಳಿದ್ದರು. ಅದಕ್ಕೆ ಸರ್ಕಾರ ಯಾವುದೇ ಬಂಡವಾಳ ಹೊಸದಾಗಿ ರಾಜ್ಯಕ್ಕೆ ಬಂದಿಲ್ಲ ಮತ್ತು ಒಂದೇ ಒಂದು ಉದ್ಯೋಗ ಸೃಷ್ಟಿ ಆಗಿಲ್ಲ ಎಂಬ ಉತ್ತರ ನೀಡಿದೆ. ಇದು ಬಿಜೆಪಿಯವರ ಸಾಧನೆ ಎಂದು ಟೀಕಿಸಿದರು.
ಶಾಂತಿಯ ವಾತಾವರಣ ಇಲ್ಲದಿರುವುದೇ ನಷ್ಟಕ್ಕೆ ಕಾರಣ: ಸುಮಾರು ಇಪ್ಪತ್ತು ಸಾವಿರ ಉದ್ಯೋಗ ಸೃಷ್ಟಿ ಮಾಡುತ್ತಿದ್ದ ಓಲಾ ಬೈಕ್ಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ ರಾಜ್ಯದಿಂದ ತಮಿಳುನಾಡಿಗೆ ಹೋಯಿತು. ಕಾರಣ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರಶಸ್ತವಾದ ವಾತಾವರಣ ಇರಲಿಲ್ಲ. ಸಮಾಜದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಇಲ್ಲದಿರುವುದು ಈ ನಷ್ಟಕ್ಕೆ ಕಾರಣ. ನೋಟು ಅಮಾನೀಕರಣ ಹಾಗೂ ಜಿಎಸ್‌ಟಿ ಜಾರಿ ಪೂರ್ವದಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು 11 ಕೋಟಿ ಉದ್ಯೋಗಗಳನ್ನು ನೀಡಿದ್ದವು. ಇದರಲ್ಲಿ ಈಗ ಸುಮಾರು ಶೇ.60ರಷ್ಟು ಕೈಗಾರಿಕೆಗಳು ಬಂದ್ ಆಗಿ, ಇಂದು ಎರಡೂವರೆ ಕೋಟಿ ಉದ್ಯೋಗ ಮಾತ್ರ ಉಳಿದಿದೆ ಎಂದರು.
ನಿರುದ್ಯೋಗ: ರಾಜ್ಯದಲ್ಲಿ ಪದವಿ ಪಡೆದ ಯುವತಿಯರಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ. 40. ಯುವಕರ ನಿರುದ್ಯೋಗ ಪ್ರಮಾಣ ಶೇ.22ರಷ್ಟು ಇದೆ. ರಾಜ್ಯದಲ್ಲಿನ 6.66 ಕೋಟಿ ಜನರಲ್ಲಿ 70 ವರ್ಷ ಮೇಲ್ಪಟ್ಟವರು 76.06 ಲಕ್ಷ ಜನರಿದ್ದಾರೆ. ಇವರ ಸಂಖ್ಯೆ 2030ಕ್ಕೆ 1.06 ಕೋಟಿ ಆಗಲಿದೆ. 18 ರಿಂದ 23 ವಯಸ್ಸಿವರು ಈಗ 76.06 ಲಕ್ಷ ಜನರಿದ್ದಾರೆ, ಇವರ ಸಂಖ್ಯೆ 2030ಕ್ಕೆ 62 ಲಕ್ಷಕ್ಕೆ ಇಳಿಕೆಯಾಗಲಿದೆ. ವರ್ಷ ಕಳೆದಂತೆ ಯುವ ಜನರ ಸಂಖ್ಯೆ ಕುಸಿತ ಕಾಣುತ್ತಿದೆ ಎಂದರು.
ಬಡತನ ಹೆಚ್ಚಳ: ಬಹು ಸ್ವರೂಪದ ಬಡತನಕ್ಕೆ ಸಂಬಂಧಿಸಿದಂತೆ ನೀತಿ ಆಯೋಗದ ಸಮೀಕ್ಷೆಯೊಂದರ ಪ್ರಕಾರ ಕೇರಳದಲ್ಲಿ ಶೇ.0.7, ತಮಿಳುನಾಡು ಶೇ.4.9, ತೆಲಂಗಾಣ ಶೇ.13.7, ಆಂಧ್ರ ಪ್ರದೇಶ ಶೇ.12.3, ಕರ್ನಾಟಕ ಶೇ.13.2ರಷ್ಟು ಬಡತನ ಇದೆ. ಕರ್ನಾಟಕ ಬೇರೆಲ್ಲಾ ದಕ್ಷಿಣದ ರಾಜ್ಯಗಳಿಗಿಂತ ಹೆಚ್ಚು ಬಡತನವನ್ನು ಹೊಂದಿದೆ. ಗುಜರಾತ್ ಶೇ.18.6, ಉತ್ತರ ಪ್ರದೇಶ ಶೇ.37.8 ಬಡತನ ಇದೆ. ಇದು ಉತ್ತರ ಪ್ರದೇಶ, ಗುಜರಾತ್ ಮಾದರಿ. ಇದು ನಮಗೆ ಬೇಕಾ? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ: ಪತ್ರಿಕೆಯೊಂದರಲ್ಲಿ ಮಾರ್ಚ್ 7 ರಂದು ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಒಂದು ವರದಿ ಪ್ರಕಟವಾಗಿದೆ. ಈ ವರದಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಎಸ್.ಟಿ ರಮೇಶ್ ಎಂಬ ನಿವೃತ್ತ ಡಿಜಿಪಿಯೊಬ್ಬರು "ಜಾತಿ, ಧರ್ಮ ರಹಿತವಾದ ಪೊಲೀಸ್ ಇಲಾಖೆ ಇತ್ತೀಚಿನ ದಿನಗಳಲ್ಲಿ ದಿಕ್ಕು ತಪ್ಪಿದೆ, ರಾಜಕಾರಣಿಗಳ ಕಾನೂನು ಬಾಹಿರ ಹಸ್ತಕ್ಷೇಪದಿಂದ ಅಧಿಕಾರ ದುರುಪಯೋಗವಾಗುತ್ತಿದ್ದು ರಕ್ಷಣೆ ಸಿಗದೇ ಜನರು ಒದ್ದಾಡುತ್ತಿದ್ದಾರೆ" ಎಂದು ಹೇಳಿದ್ದಾರೆ. ಡಾ. ಡಿ.ವಿ ಗುರು ಪ್ರಸಾದ್ ಅವರು ರಾಜಕಾರಣಿಗಳು ಜಾತಿ ಆಧಾರದಲ್ಲಿ ವರ್ಗಾವಣೆ ನಡೆಸದೇ ದಕ್ಷತೆ ಹಾಗೂ ಅರ್ಹತೆಗಳನ್ನು ಮಾನದಂಡವಾಗಿ ಇಟ್ಟುಕೊಂಡರೆ ವ್ಯವಸ್ಥೆ ಬದಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Watch... ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಖತ್ ಸ್ಟೆಪ್ ಹಾಕಿದ ಸಿದ್ದರಾಮಯ್ಯ
ಹೋಟೆಲ್ನ ಮೆನುವಿನಲ್ಲಿ ತಿಂಡಿ ಬೆಲೆ ಹಾಕಿದಂತೆ ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿ ಮಾಡಲಾಗಿದೆ ಎಂದು ಪತ್ರಿಕೆಯವರು ಹೇಳಿದ್ದಾರೆ. ಪಿಎಸ್‌ಐಗೆ 10-30 ಲಕ್ಷ, ಇನ್ಸ್ಪೆಕ್ಟರ್ಗೆ ರೂ. 20 ಲಕ್ಷದಿಂದ 1 ಕೋಟಿ ರೂಪಾಯಿ, ಎಸಿಪಿಗೆ 25 ಲಕ್ಷದಿಂದ 1 ಕೋಟಿ ರೂಪಾಯಿ, ಡಿವೈಎಸ್‌ಪಿಗೆ 25 ಲಕ್ಷದಿಂದ 1 ಕೋಟಿ ರೂಪಾಯಿ, ಡಿಸಿಪಿ ಹುದ್ದೆಗೆ 1-5 ಕೋಟಿ ರೂಪಾಯಿ ಅಂತ ಲಂಚ ನಿಗದಿ ಮಾಡಲಾಗಿದೆ.
ಇಂತಹ ಅಧಿಕಾರಿಗಳಿಂದ ಕಾನೂನು ಸುವ್ಯವಸ್ಥೆ ನಿರೀಕ್ಷೆ ಮಾಡಬಹುದಾ? ಡಿಸೆಂಬರ್ 4 ರಂದು ಗೃಹ ಸಚಿವರು ಶಿವಮೊಗ್ಗದಲ್ಲಿ ಪೊಲೀಸರು ಲಂಚ ತಿಂದು ನಾಯಿ ರೀತಿ ಬಿದ್ದಿದ್ದಾರೆ ಎಂದು ಹೇಳಿದ್ದರು. ಅಂದರೆ ಇಲಾಖೆಯ ಭ್ರಷ್ಟಾಚಾರವನ್ನು ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದಾಯಿತು ಎಂದು ವ್ಯಂಗ್ಯವಾಡಿದರು.