ಬೆಂಗಳೂರು : ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ನ ಹಿರಿಯ ಮುಖಂಡ ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಲ್ಲ. ನನಗೆ ಅವರ ಬಗ್ಗೆ ಗೊತ್ತು. ಅವರು ನನ್ನ ಕ್ಲೋಸ್ ಫ್ರೆಂಡ್ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಎಲ್ಲಿಗೂ ಹೋಗಲ್ಲ. ಬಹಳ ಸಾರಿ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದಾರೆ.
ಕೋಪದಲ್ಲಿ ಆ ರೀತಿ ಮಾತನಾಡಿದ್ದಾರೆ. ನಾನು ಅವರ ಜೊತೆ ಮಾತನಾಡುತ್ತೇನೆ. ನನ್ನ ಒಳ್ಳೆಯ ಸ್ನೇಹಿತ, ಏನೇ ಹೇಳಿದ್ರೂ ಅದು ಅವರು ಹಾರೈಸಿದ ಹಾಗೆ ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ಹಣಬಲ, ತೋಳ್ಬಲ ಇದ್ದವರಿಗೆ ಮಾತ್ರ ಸ್ಥಾನಮಾನ ಎಂಬ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಹಾಗಾದ್ರೆ ಇಬ್ರಾಹಿಂಗೆ ಎರಡು ಬಾರಿ ಪರಿಷತ್ ಸ್ಥಾನ ನೀಡಿದ್ದೇವೆ. ಪ್ಲಾನಿಂಗ್ ಕಮಿಷನ್ ಉಪಾಧ್ಯಕ್ಷ ಮಾಡಿದ್ದೆವು. ಇವರ ಹತ್ತಿರ ತೋಳ್ಬಲ ಎಲ್ಲಾ ಇತ್ತಾ? ಕೋಪದಲ್ಲಿ ಮಾತನಾಡಿದ್ದಾರೆ, ನಾನು ಸಮಾಧಾನ ಮಾಡುತ್ತೇನೆ. ಇಬ್ರಾಹಿಂ ಈಸ್ ಮೈ ಗುಡ್ ಫ್ರೆಂಡ್ ಎಂದರು.
ಇಬ್ರಾಹಿಂ ಬಿರಿಯಾನಿ ತಿನ್ನಲು ನನ್ನನ್ನು ಕರೆದೇ ಕರೆಯುತ್ತಾರೆ. ಬಹಳ ಸಲ ಹೋಗಿದ್ದೇನೆ. ನನಗೋಸ್ಕರ ಸ್ಪೆಷಲ್ ಬಿರಿಯಾನಿ ಮಾಡಿಸುತ್ತಾರೆ. ಸ್ನೇಹ ಅಲ್ವಾ, ಸಮಾಧಾನ ಮಾಡ್ತೀನಿ. ಕೋಪದಲ್ಲಿ ಹಾಗೆ ಮಾತನಾಡಿದ್ದಾರಷ್ಟೇ.. ಎಂದರು.
ನಾವೆಲ್ಲ ಹಿನ್ನೆಲೆ ಗಾಯಕರು, ಗೇಣಿದಾರರು. ನಮ್ಮ ಫಸಲು ತಗೊಳ್ತಾರೆ. ಆಮೇಲೆ ಕಿತ್ತು ಹಾಕ್ತಾರೆ ಎಂಬ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಒಂದು ರಾಜಕೀಯ ಪಕ್ಷ ಅಂದ ಮೇಲೆ ಹಿನ್ನೆಲೆ ಗಾಯಕರು ಇರಬೇಕು, ಮುನ್ನೆಲೆ ಗಾಯಕರು ಇರಬೇಕು. ಪಾತ್ರ ಮಾಡುವವರು, ಪಾತ್ರಗಳನ್ನು ನಿರ್ದೇಶಿಸುವವರು ಇರಬೇಕು. ರಾಜಕೀಯ ಪಕ್ಷ ಅಂದ ಮೇಲೆ ಇವೆಲ್ಲ ಇರುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿ.ಎಂ. ಇಬ್ರಾಹಿಂ ಅಸಮಾಧಾನ ಶಮನಕ್ಕೆ ಮಾತುಕತೆ ನಡೆಸುತ್ತೇನೆ: ಡಿಕೆಶಿ
ರಾಯಚೂರು ಜಿಲ್ಲೆಯ ನ್ಯಾಯಾಧೀಶ ಅವರಿಂದ ಅಂಬೇಡ್ಕರ್ಗೆ ಅಪಮಾನ ಆರೋಪ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ನ್ಯಾಯಾಧೀಶರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿರಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಸಿಲ್ಲ ಎಂದು ಹೇಳಿದ್ದಾರೆ.
ಅವರ ಫೋಟೋ ಇಲ್ಲದೇ ರಿಪಬ್ಲಿಕ್ ಡೇ ಆಚರಣೆ ಮಾಡಿದ್ದು, ಅವರಿಗೆ ತೋರಿದ ಅಗೌರವ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ನ್ಯಾಯಾಧೀಶರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡ್ತೇನೆ. ಹೈಕೋರ್ಟ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ