ಬೆಂಗಳೂರು: ಅಧಿವೇಶನಕ್ಕೆ ಕೇವಲ 9 ದಿನ ಮಾತ್ರ ಉಳಿದಿವೆ. ಆದರೆ ಇನ್ನೂ ಕೈ ಪ್ರತಿಪಕ್ಷ ನಾಯಕನ ನೇಮಕವಾಗದಿರುವುದು ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಬಹುತೇಕ ಪ್ರತಿಪಕ್ಷದ ನಾಯಕರಾಗಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಇವರಿಗೆ ಜಿ.ಪರಮೇಶ್ವರ್ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದು, ಇವರಿಬ್ಬರಿಗೆ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಕೂಡ ಟಕ್ಕರ್ ಕೊಡಲು ಮುಂದಾಗಿದ್ದಾರೆ. ಈ ಬೆಳವಣಿಗೆ ಹಿನ್ನೆಲೆ ಯಾರನ್ನು ನೇಮಿಸಬೇಕೆಂಬ ಗೊಂದಲದಲ್ಲಿ ಹೈಕಮಾಂಡ್ ಇದ್ದು, ಯಾರನ್ನು ಪ್ರತಿಪಕ್ಷದ ನಾಯಕರನ್ನಾಗಿಸಬೇಕೆಂಬ ಚರ್ಚೆಯನ್ನೇ ಇನ್ನೂ ನಡೆಸುತ್ತಿದೆ.
ಅಧಿವೇಶನ ಆರಂಭವಾಗುವ ಹಿನ್ನೆಲೆ ಇನ್ನು ಮೂರ್ನಾಲ್ಕು ದಿನದಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆಯನ್ನು ಹೈಕಮಾಂಡ್ ಅಂತಿಮಗೊಳಿಸಬೇಕಾಗಿದೆ. ಸಿದ್ದರಾಮಯ್ಯಗೆ ಕೊನೆ ಕ್ಷಣದಲ್ಲಿ ಈ ಜವಾಬ್ದಾರಿ ನೀಡ್ತಾರಾ ಎಂಬ ಕುತೂಹಲ ಮೂಡಿಸಿದೆ.
ಪ್ರತಿಪಕ್ಷ ನಾಯಕನ ಆಯ್ಕೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನಿವಾಸ ಇದೀಗ ಚಟುವಟಿಕೆ ಕೇಂದ್ರವಾಗಿದೆ. ವಿಪರ್ಯಾಸ ಎಂದರೆ ಕಳೆದ ಆರೂವರೆ ವರ್ಷಗಳಿಂದ ಸಿದ್ದರಾಮಯ್ಯ ವಾಸವಾಗಿದ್ದ ಕಾವೇರಿ ನಿವಾಸ ಇದೀಗ ಕೈತಪ್ಪಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಈ ನಿವಾಸಕ್ಕೆ ಬರಲು ಸಿದ್ಧತೆ ನಡೆಸಿದ್ದಾರೆ.
ಬಾಡಿಗೆ ಮನೆಗಾಗಿ ಹುಡುಕಾಟ...
ಬಾಡಿಗೆ ಮನೆಗಾಗಿ ಮಾಜಿ ಸಿಎಂ ಸಿದ್ದು ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಮನೆಗೆ ತಲಾಶ್ ನಡೆಸಿದ್ದಾರೆ. ಕಾವೇರಿ ನಿವಾಸ ಸದ್ಯ ಸಿದ್ದರಾಮಯ್ಯ ಕೈತಪ್ಪಿದ್ದು, ಮನೆ ಖಾಲಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಕಾವೇರಿಯಲ್ಲಿ ವಾಸವಾಗಿದ್ದ ಅವರು, ಈ ವಾರದಲ್ಲಿ ಮನೆ ಖಾಲಿ ಮಾಡಲೇಬೇಕಿದೆ.
ವಿಜಯನಗರದಲ್ಲಿ ಸಿದ್ದರಾಮಯ್ಯಗೆ ಸ್ವಂತ ನಿವಾಸವಿದೆ. ಆದರೆ ವಿಜಯನಗರ ನಿವಾಸಕ್ಕೆ ಹೋಗಲು ಸಿದ್ದು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವಿಧಾನಸೌಧಕ್ಕೆ ಸಮೀಪದಲ್ಲಿ ಇರುವ ಯಾವುದಾದರೂ ನಿವಾಸವನ್ನು ಹುಡುಕಿ ಸ್ಥಳಾಂತರಗೊಳ್ಳುವ ಚಿಂತನೆ ನಡೆಸಿದ್ದಾರೆ. ಇದರಿಂದಾಗಿ ಇವರ ಆಪ್ತ ಶಾಸಕ ಬೈರತಿ ಸುರೇಶ್ ಸದಾಶಿವನಗರ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯಗೆ ಮನೆ ಹುಡುಕುವ ಕಾರ್ಯ ನಡೆಸಿದ್ದಾರೆ.
ನಾಲ್ಕೈದು ಮನೆಗಳನ್ನು ಈಗಾಗಲೇ ನೋಡಲಾಗಿದೆ. ಯಾವುದಾದರೂ ಇಷ್ಟವಾದಲ್ಲಿ ಸಿದ್ದರಾಮಯ್ಯ ಕೂಡಲೇ ಅಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.