ಬೆಂಗಳೂರು: ವಿಶೇಷ ವಿಮಾನದ ಲ್ಯಾಂಡಿಂಗ್ಗೆ ಪೊಲೀಸ್ ಅಧಿಕಾರಿಗಳು ಅನುಮತಿ ನಿರಾಕರಿಸಿರುವ ಕಾರಣ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳೂರು ಭೇಟಿಯನ್ನು ಇಂದು ರದ್ದುಗೊಳಿಸಿದ್ದಾರೆ. ಅಲ್ಲದೆ, ಈ ಭೇಟಿಯನ್ನು ಅವರು ನಾಳೆಗೆ ಮುಂದೂಡಿದ್ದಾರೆ.
ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು, ಇಂದು ಮಧ್ಯಾಹ್ನ 2ಗಂಟೆಗೆ ಸಿದ್ದರಾಮಯ್ಯ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ತೆರಳಲು ನಿರ್ಧರಿಸಿದ್ದರು. ಆದರೆ, ಪೊಲೀಸರು ಬೆಂಗಳೂರಿನ ಹೆಚ್ಎಎಲ್ನಿಂದ ಯಾವುದೇ ಫ್ಲೈಟ್ ಟೇಕ್ ಆಫ್ ಆಗಲು ಅನುಮತಿ ನೀಡಲಿಲ್ಲ. ನಾಳೆ ಸಾಮಾನ್ಯ ವಿಮಾನದಲ್ಲೇ ಸಿದ್ದರಾಮಯ್ಯ ಮಂಗಳೂರಿಗೆ ತೆರಳಲಿದ್ದೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿಯೋಗವನ್ನು ಬಂಧಿಸಿರುವುದನ್ನು ಖಂಡಿಸುತ್ತೇನೆ. ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಪ್ರತಿಪಕ್ಷ ನಾಯಕನಾಗಿರುವ ನನಗೆ ಅನುಮತಿ ನೀಡಲಿಲ್ಲ ಅಂದರೆ ಹೇಗೆ? ಇದು ಸರ್ವಾಧಿಕಾರಿ ಧೋರಣೆ ಎಂದು ಕಿಡಿಕಾರಿದರು.