ಹೊಸಕೋಟೆ: ಬೆಂಬಲಿಗರ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಶಾಸಕ ಶರತ್ ಬಚ್ಚೇಗೌಡ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆಸಿದ ಡಿವೈಎಸ್ಪಿ ಉಮಾಶಂಕರ್ ಹಾಗೂ ಇನ್ಸ್ಪೆಕ್ಟರ್ ರಂಗಪ್ಪ ಮತ್ತು ಸಬ್ ಇನ್ಸ್ಪೆಕ್ಟರ್ ರಾಜುರನ್ನು ಕೂಡಲೇ ಅಮಾನತು ಮಾಡುವಂತೆ ಪೊಲೀಸ್ ಠಾಣೆ ಎದುರು ಶಾಸಕ ಶರತ್ ಬಚ್ಚೇಗೌಡ ಬೃಹತ್ ಪ್ರತಿಭಟನೆ ನಡೆಸಿದ್ರು. ಅಲ್ಲದೆ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಘಟನೆ ಹಿನ್ನೆಲೆ
ಸಚಿವ ಸ್ಥಾನ ಪಡೆದ ಎಂಟಿಬಿ ನಾಗರಾಜ್ ಇಂದು ಮೊದಲ ಬಾರಿಗೆ ಹೊಸಕೋಟೆ ನಗರದ ಗೌತಮ್ ಕಾಲೋನಿಯಲ್ಲಿ ಕಾಮಗಾರಿಯೊಂದಕ್ಕೆ ಗುದ್ದಲಿಪೂಜೆ ನಡೆಸಿದರು. ಆದ್ರೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಶರತ್ ಬಚ್ಚೇಗೌಡರಿಗೆ ಆಹ್ವಾನ ನೀಡಿರಲಿಲ್ಲ. ನಿನ್ನೆಯಷ್ಟೆ ಕಾಮಗಾರಿಗೆ ಗುದ್ದಲಿಪೂಜೆ ನಡೆಸಲು ತಿರ್ಮಾನ ಮಾಡಿದ್ದ ನಗರಸಭೆ ಅಧಿಕಾರಿಗಳು ಇಂದು ದಿಡೀರ್ ಕಾಮಾಗಾರಿ ಪೂಜೆಯನ್ನ ನಡೆಸಲು ಮುಂದಾಗಿದ್ದರು.
ಇದರಿಂದ ಕೆರಳಿದ ಶಾಸಕ ಶರತ್ ಬೆಂಬಲಿಗರು ಸ್ಥಳಕ್ಕೆ ಬಂದು ಪ್ರಶ್ನೆ ಮಾಡಿ ಗಲಾಟೆ ನಡೆಸಿದ್ದರು. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಶರತ್ ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದ್ರಿಂದ ಕೆರಳಿದ ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ರ್ಯಾಲಿ ನಡೆಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಹೊಸಕೋಟೆ ಬೆಂಗಳೂರು ಹೆದ್ದಾರಿ ತಡೆದು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ರಿಂದ ಎರಡು ಕಿಲೋ ಮಿಟರ್ ದೂರ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹೈರಾಣಾದ್ರು. ಪ್ರತಿಭಟನೆ ನಂತರ ಎಸ್ಪಿ ಜತೆ ಮಾತುಕತೆ ನಡೆಸಿದ ಶಾಸಕ ಶರತ್, ಡಿವೈಎಸ್ಪಿಯನ್ನ ಅಮಾನತು ಮಾಡುವಂತೆ ಆಗ್ರಹಿಸಿ ಐಜಿಪಿಗೆ ದೂರು ಸಲ್ಲಿಸಿದ್ದಾರೆ.
ಜತೆಗೆ ಒಬ್ಬ ಶಾಸಕರನ್ನ ಕಾಮಗಾರಿ ಪೂಜೆಗೆ ಕನಿಷ್ಠ ಗಣನೆಗೆ ತೆಗೆದುಕೊಳ್ಳದಿರುವುದನ್ನು ಕೇಳಲು ಹೋದ ನಮ್ಮ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ. ಶಿಷ್ಟಚಾರ ಉಲ್ಲಂಘನೆ ಮಾಡಿದವರ ವಿರುದ್ಧ ವಿಧಾನಸಭೆಯಲ್ಲಿ ದನಿ ಎತ್ತುವುದಾಗಿ ಶರತ್ ಕಿಡಿಕಾರಿದರು.
ಅಧಿಕಾರಿಗಳು ನನ್ನಂತೆ ಅವರನ್ನು ಕರೆದಿದ್ದಾರೆ, ಅವರು ಬರಬಹುದಿತ್ತು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂಟಿಬಿ ನಾಗರಾಜ್, ಶಾಸಕರನ್ನು ಕರೆದಂತೆ ನನ್ನನ್ನು ಕಾಮಗಾರಿ ಗುದ್ದಲಿಪೂಜೆಗೆ ಆಹ್ವಾನ ಮಾಡಿದ್ದರು. ಅವರಿಗೂ ಅಧಿಕಾರಿಗಳು ತಿಳಿಸಿದ್ದರಂತೆ. ಶಾಸಕರು ಬರಬಹುದಿತ್ತಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.