ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಯಿಂದ ನಗರದಲ್ಲಿ 2 ಸಾವಿರ ಮಂದಿಗೆ ಇಂದಿನಿಂದ ಸೆರೋ ಸಮೀಕ್ಷೆ ಪಾರಂಭವಾಗಿದೆ. ಈ ಸಮೀಕ್ಷೆಗೆ ಮುಖ್ಯ ಆಯುಕ್ತ ಗೌರವ ಗುಪ್ತ ಹಲಸೂರು ರೆಫೆರಲ್ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.
ನಗರದಲ್ಲಿ 2 ಸಾವಿರ ಮಂದಿಗೆ ಸೆರೋ ಸಮೀಕ್ಷೆ ನಡೆಸಲಿದ್ದು, 3 ಗುಂಪುಗಳಾದ 18 ವರ್ಷ ಒಳಗಿನ (ಶೇ.30), 18 ವರ್ಷ ಮೇಲ್ಪಟ್ಟ ವಯಸ್ಕರು (ಶೇ.50) ಹಾಗೂ 45 ವರ್ಷ ಮೇಲ್ಪಟ್ಟವರಿಗೆ (ಶೇ.20) ಸಮೀಕ್ಷೆ ನಡೆಸಲಾಗುತ್ತಿದೆ. ಈ 2 ಸಾವಿರ ಮಂದಿಯಲ್ಲಿ ಸಾವಿರ ಮಂದಿ ಲಸಿಕೆ ಪಡೆದ ಹಾಗೂ ಸಾವಿರ ಮಂದಿ ಲಸಿಕೆ ಪಡೆಯದೇ ಇರುವವರ ರಕ್ತದ ಸೀರಂಗಳನ್ನು ಸಂಗ್ರಹಿಸಿ ಅವರಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯ ಇದೆ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ.
ಪಾಲಿಕೆಯ ಎ.ಎನ್.ಎಂ, ಆಶಾ ಕಾರ್ಯಕರ್ತರು ಮತ್ತು ಪ್ರಯೋಗಾಲಯ ತಂತ್ರಜ್ಞರ ಕಾರ್ಯಪಡೆಗಳನ್ನು ಬಳಸಿಕೊಂಡು ಮನೆ - ಮನೆಗೆ ಸಮೀಕ್ಷೆ ನಡೆಸಿ, ಗುರುತಿಸಿದ ವ್ಯಕ್ತಿಗಳಿಂದ ರಕ್ತದ ಮಾದರಿ ಮತ್ತು ಗಂಟಲಿನ ಸ್ವಾಬ್ ಅನ್ನು ಸಂಗ್ರಹಿಸಲಾಗುತ್ತದೆ. ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಮತ್ತು ಗಂಟಲಿನ ಸ್ವಾಬ್ ಅನ್ನು ಆರ್‌ಟಿ - ಪಿಸಿಆರ್‌ಗೆ ಒಳಪಡಿಸಲಾಗುತ್ತದೆ. ಇದನ್ನು ವಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಆರೋಗ್ಯಾಧಿಕಾರಿಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳ ಸಮನ್ವಯದೊಂದಿಗೆ ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ತಂಡವು ಸಮೀಕ್ಷಾ ಕಾರ್ಯ ನಡೆಸುತ್ತಾರೆ.
ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಇಂತಿಷ್ಟು ಮಂದಿಗೆ ಸಮೀಕ್ಷೆ ನಡೆಸಬೇಕೆಂದು ಪಟ್ಟಿ ನೀಡಿದ್ದು, ವಾರದೊಳಗಾಗಿ ಸೆರೋ ಸಮೀಕ್ಷೆಯನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ. ಸೆರೋ ಸಮೀಕ್ಷೆಯಲ್ಲಿ ಸಂಗ್ರಹಿಸಿದ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ನೀಡಿ ಅಧ್ಯಯನ ನಡೆಸಲಾಗುತ್ತದೆ. ಈ ಮೂಲಕ ನಗರದ ಜನಗರಲ್ಲಿ ಎಷ್ಟು ರೋಗ ನಿರೋಧಕ ಶಕ್ತಿ ಇದೆ ಎಂಬ ಮಾಹಿತಿ ಲಭ್ಯವಾಗಲಿದೆ.
ಸೋಂಕು ಪ್ರತಿರೋಧ, ತೀವ್ರತೆಗಳ ಬಗ್ಗೆ ತಿಳಿಯಲು ಸೆರೋ ಸಮೀಕ್ಷೆ ನಡೆಸಲಾಗುತ್ತಿದ್ದು, ಈ ಸಮೀಕ್ಷೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಸೋಂಕು ತಡೆಯುವ ಕುರಿತು ನಿಯಮಗಳನ್ನು ರೂಪಿಸಲಾಗುತ್ತದೆ. ಇದರಲ್ಲಿ ಎಷ್ಟು ಜನರಿಗೆ ಸೋಂಕು ಬಂದಿದೆ, ಎಷ್ಟು ಜನರಿಗೆ ಸೋಂಕು ತಗುಲಿಲ್ಲ, ಎಷ್ಟು ಜನರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ ಎನ್ನುವ ಅಂಶಗಳು ಈ ಮೂಲಕ ತಿಳಿಯಲಿವೆ ಎಂದು ಆಯುಕ್ತರು ತಿಳಿಸಿದರು.