ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಪ್ರಾತ್ಯಕ್ಷಿಕೆ ವೀಕ್ಷಿಸಿದರು. ವಿಧಾನಸಭೆ ಉಪಸಭಾಧ್ಯಕ್ಷ ಆನಂದ್ ಚಂದ್ರಶೇಖರ್ ಮಾಮನಿ ಮತ್ತು ರೇಣುಕಾ ಯಲ್ಲಮ್ಮ ದೇವಸ್ಥಾನದ ಟ್ರಸ್ಟಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸಿಎಂ, ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಾಸ್ತಾವಿಕ ಯೋಜನೆಗೆ 26 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಬೇಕು. ಜತೆಗೆ ಈಗಾಗಲೇ ಟೆಂಡರ್ ಕರೆದಿರುವ 20 ಕೋಟಿ ರೂ. ಅಂದಾಜು ವೆಚ್ಚದ ಒಳ ಚರಂಡಿ ನಿರ್ಮಾಣ ಕಾಮಗಾರಿಯನ್ನು ಜೋಡಿಸಬೇಕು. ದೇವಸ್ಥಾನದ ಖಜಾನೆಯಲ್ಲಿ 46 ಕೋಟಿ ರೂ. ಲಭ್ಯವಿದೆ. ಈ ಪೈಕಿ ಸ್ವಲ್ಪ ಮೊತ್ತವನ್ನು ದೇವಸ್ಥಾನದ ದೈನಂದಿನ ನಿರ್ವಹಣಾ ಕಾರ್ಯಕ್ಕೆ ಕಾದಿಡಬೇಕು. 20 ಕೋಟಿ ರೂ. ಒಳಚರಂಡಿ ನಿರ್ಮಾಣ ಕೆಲಸಕ್ಕೆ ವಿನಿಯೋಗವಾಗುತ್ತದೆ ಎಂದರು.
ಆರ್ಥಿಕ ಇಲಾಖೆಯಿಂದಲೂ ಅಗತ್ಯ ನೆರವು ಕೊಡಿಸುವೆ. ದೇವಸ್ಥಾನದ ಹಣವನ್ನು ಹೊಂದಿಸಿ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅಂದಾಜು ವೆಚ್ಚ ಪರಿಷ್ಕರಣೆ, ವಿಸ್ತೃತ ಯೋಜನಾ ವರದಿಗೆ ತಾಂತ್ರಿಕ ಅನುಮೋದನೆ, ಪಾರದರ್ಶಕ ನಿರ್ವಹಣೆಗೆ ಪೂರಕ ಕ್ರಮಗಳನ್ನು ಕೈಗೊಂಡ ಬಳಿಕ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.
ಭಕ್ತರ ವಾಸ್ತವ್ಯಕ್ಕೆ ಸದ್ಯ 400 ಕೊಠಡಿಗಳು ಲಭ್ಯವಿದ್ದು, ಹೆಚ್ಚುವರಿಯಾಗಿ 200 ರಿಂದ 300 ಕೊಠಡಿಗಳ ನಿರ್ಮಾಣ, ಆಯಾ ವಸತಿ ಸಮುಚ್ಚಯದ ಕೆಳಗೆ ಪ್ರಸಾದ ವ್ಯವಸ್ಥೆ, ನಿತ್ಯ ಪ್ರಸಾದ ಏರ್ಪಾಟು, ಶೌಚ ಮತ್ತು ಸ್ನಾನ ಗೃಹ ಪ್ರತ್ಯೇಕವಾಗಿ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ದೇವಸ್ಥಾನಕ್ಕೆ ಸಾಮಾನ್ಯ ಪ್ರವೇಶ ಹಾಗೂ ವಿಶೇಷ ಸರದಿ ಸಾಲುಗಳ ನಿರ್ಮಾಣ ಹಾಗೂ ಅಂಗಡಿ ಮುಂಗಟ್ಟುಗಳ ನಿರ್ಮಾಣಕ್ಕೆ ಪ್ರತ್ಯೇಕ ವ್ಯವಸ್ಥೆ, ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ದೇವಸ್ಥಾನದ ಸಮೀಪದಲ್ಲೇ ವಾಹನ ನಿಲುಗಡೆ ತಾಣವನ್ನ ನಿರ್ಮಿಸುವ ಕುರಿತು ಚರ್ಚೆ ನಡೆಯಿತು. ದೇವಸ್ಥಾನ ಆವರಣದಲ್ಲಿ ಹಾಗೂ ಹೊರಭಾಗದಲ್ಲಿ ಮಳೆ ನೀರು ಸುಗಮವಾಗಿ ಹಾರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಸೂಚನೆ ನೀಡಿದರು.
ಈ ಭಾಗದಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದ್ದರೂ, ಹಿಂಭಾಗದಲ್ಲಿ ದೊಡ್ಡ ಬೆಟ್ಟದ ಸಾಲು ಇದ್ದರೂ ಸಹ ಆತಂಕವಿಲ್ಲ. ದೇವಾಲಯದ ಒಳಭಾಗಕ್ಕೆ ನೀರು ಹರಿದು ಬರುವುದಿಲ್ಲ ಎಂಬ ವಿವರಣೆಯನ್ನು ಅಧಿಕಾರಿಗಳು ನೀಡಿದರು.
ಇದನ್ನೂ ಓದಿ: 'ಬಿಜೆಪಿ ಸರ್ಕಾರದ ಬೊಕ್ಕಸದಲ್ಲಿ ಹಣವಿದೆ, ಬೊಮ್ಮಾಯಿ ಸರ್ಕಾರ ಹೆಚ್ಚು ತೆರಿಗೆ ಸಂಗ್ರಹಿಸಿದೆ'