ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ನಮ್ಮ ರಾಜ್ಯದಲ್ಲಿ ಹರಡುತ್ತಿರುವ ಸಂದರ್ಭದಲ್ಲಿ ಕೊರೊನಾ ಸೋಂಕು ತಡೆಯಲು ಬಳಸುವ ಸ್ಯಾನಿಟೈಸರ್ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಬಿಜೆಪಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಅವರು ದೂರು ನೀಡಿದ್ದಾರೆ.
ಸ್ಯಾನಿಟೈಸರ್ ಅಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕಾರ್ಯದರ್ಶಿ ಪಂಕಜಕುಮಾರ್ ಪಾಂಡೆ ಹಾಗೂ ಕೆಡಿ ಎಲ್ಡಬ್ಲ್ಯೂಎಸ್ನ ಹೆಚ್ಚುವರಿ ನಿರ್ದೇಶಕಿ ಎನ್ ಮಂಜುಶ್ರೀ ವಿರುದ್ಧ ದೂರು ದಾಖಲಾಗಿದೆ.
ಆಂಧ್ರ ಪ್ರದೇಶದ ಎಸ್ಪಿವೈ ಆಗ್ರೋ ಇಂಡಸ್ಟ್ರೀಸ್ಗೆ 180 ಎಂಎಲ್ನ 30 ಸಾವಿರ ಸ್ಯಾನಿಟೈಸರ್ ಬಾಟಲ್ ಮತ್ತು 500 ಎಂಎಲ್ನ 15 ಸಾವಿರ ಬಾಟಲ್ ಖರೀದಿಗೆ ಒಪ್ಪಂದವಾಗಿತ್ತು. ಆದರೆ ಕೆಡಿಎಲ್ಡಬ್ಲ್ಯೂಸ್ 5 ಲೀಟರ್ ಸ್ಯಾನಿಟೈಸರ್ನ್ನ 2,500 ರೂ. ದರದಲ್ಲಿ ಖರೀದಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಇದೇ ಕಂಪನಿ ಬೇರೆ ರಾಜ್ಯಕ್ಕೆ 5 ಲೀಟರ್ ಸ್ಯಾನಿಟೈಸರ್ನ್ನು 520 ರೂ. ದರದಲ್ಲಿ ಸರಬರಾಜು ಮಾಡಿದೆ. ನಮ್ಮ ಕರ್ನಾಟಕಕ್ಕೆ ಯಾಕೆ ಈ ರೀತಿ ಮೋಸ ಮಾಡಿದೆ. ಹೆಚ್ಚುವರಿ ದರದಲ್ಲೇ ಇದೇ ಕಂಪನಿಯಿಂದ ಸ್ಯಾನಿಟೈಸರ್ನ್ನ ಅಧಿಕಾರಿಗಳು ಖರೀದಿಸಿದ್ದೇಕೆ ಎಂದು ಸಾರ್ವಭೌಮ ಬಗಲಿ ಪ್ರಶ್ನಿಸಿದ್ದಾರೆ.
ರಾಮನಗರ, ಕಲಬುರಗಿ, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆ, ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ, ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಗಳಿಗೆ ಸ್ಯಾನಿಟೈಸರ್ನ್ನು ಖರೀದಿಸಲು ಆದೇಶ ನೀಡಲಾಗಿದೆ. ಆದರೆ ಈ ಸ್ಯಾನಿಟೈಸ್ ಕಳಪೆ ಗುಣಮಟ್ಟದಿಂದ ಕೂಡಿದೆ. ಅಧಿಕಾರಿಗಳಿಗೆ ಮಾಹಿತಿ ಗೊತ್ತಿದ್ರೂ ಅದೇ ಕಂಪನಿಯಿಂದ ಸ್ಯಾನಿಟೈಸ್ ಖರೀದಿಸುವುದನ್ನು ನಿಲ್ಲಿಸಲಿಲ್ಲ. ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲವೇಕೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಅಧಿಕಹಣಕ್ಕೆ ಸ್ಯಾನಿಟೈಸರ್ ಖರೀದಿ ಮಾಡಿರುವ ಕಾರಣ, ಇದರಲ್ಲಿ ಅಧಿಕಾರಿಗಳ ಕೈವಾಡದ ಗುಮಾನಿ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಮಾಜಿ ಶಾಸಕರು ಮನವಿ ಮಾಡಿದ್ದಾರೆ.