ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ಸಿಲುಕಿರುವ ನಟಿಮಣಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳಿಗೆ ಬಗೆದಷ್ಟು ಮಾಹಿತಿಗಳು ಹೊರ ಬರುತ್ತಿವೆ.
ಇಬ್ಬರು ಕೂಡ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಮಿಂಚುತ್ತಿದ್ದರು. ತಮ್ಮ ವೈಯಕ್ತಿಕ ಲೋಕದಲ್ಲಿ ಮಾಡುತ್ತಿದ್ದ ವಿಚಾರಗಳು ಸದ್ಯ ಒಂದೊಂದೇ ಬಟಾಬಯಾಲಾಗುತ್ತಿವೆ. ಇದು ನಟಿಮಣಿಯರಿಗೆ ಸಂಕಷ್ಟ ತಂದೊಡ್ಡಿದೆ.
ಪರಪ್ಪನ ಅಗ್ರಹಾರದಲ್ಲಿದ್ದುಕೊಂಡೇ ತಮ್ಮ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಲು ನಟಿಯರು ತಯಾರಿ ಮಾಡುತ್ತಿದ್ದರೆ, ಇತ್ತ ತನಿಖೆಗಿಳಿದಿರುವ ಸಿಸಿಬಿ ಪೊಲೀಸರಿಗೆ ಇದೇ ಆರೋಪಿಗಳು ರೌಡಿಗಳು, ಅಂಡರ್ವರ್ಲ್ಡ್ ಡಾನ್ಗಳ ಜೊತೆ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಐಎಸ್ಡಿ ಜ್ಞಾನಭಾರತಿ ಠಾಣೆಯ ರೌಡಿ ರಾಣಿ ಎಂಬಾಕೆಯನ್ನು ಖೆಡ್ಡಾಗೆ ಕೆಡವಲು ಮುಂದಾಗಿ ಡ್ರಗ್ಸ್ ಮಾಹಿತಿ ಕಲೆ ಹಾಕಿದಾಗ, ಸ್ಯಾಂಡಲ್ವುಡ್ ಮಾಫಿಯಾದಲ್ಲಿ ರೌಡಿಗಳು ಕೈಜೋಡಿಸಿರುವ ವಿಚಾರ ಬಯಲಾಗಿತ್ತು.
ಸಂಜನಾ ಹಾಗೂ ರಾಗಿಣಿ ಹಾಗೂ ಆಪ್ತರ ಕರೆ ವಿವರಗಳಲ್ಲಿ ಇದಕ್ಕೆ ಬೇಕಾದ ಪುರಾವೆಗಳು ಸಿಕ್ಕಿವೆ. ಹೀಗಾಗಿ ಆರೋಪಿಗಳು ರೌಡಿಗಳನ್ನು ಪೆಡ್ಲಿಂಗ್ ಮಾಡಲು ಬಳಸುತ್ತಿದ್ದ ಮಾಹಿತಿ ಲಭ್ಯವಾಗಿದೆ. ಸದ್ಯ ಇದೇ ಆಧಾರದ ಮೇರೆಗೆ ಪೊಲೀಸರು ಕೆಲ ರೌಡಿಗಳ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ.