ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲದಲ್ಲಿ ಸಕ್ರಿಯಾಗಿದ್ದಾರೆ ಎಂಬ ಆರೋಪದಡಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ನಟಿ ಸಂಜನಾ ಗಲ್ರಾನಿ ಎರಡನೇ ಬಾರಿ ಹೈಕೋರ್ಟ್ಗೆ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ನಟಿ ಸಂಜನಾ ಗಲ್ರಾನಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಅವರಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದು, ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ಪೀಠ, ಅರ್ಜಿದಾರರು ಅನಾರೋಗ್ಯ ಕಾರಣಕ್ಕೆ ಜಾಮೀನು ಕೋರಿದ್ದಾರೆ. ಹೀಗಾಗಿ ಜೈಲು ಅಧಿಕಾರಿಗಳಿಂದ ಆರೋಪಿತ ನಟಿಯ ಆರೋಗ್ಯದ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿತು.