ಬೆಂಗಳೂರು: ತನ್ನನ್ನು ಪಕ್ಷದಿಂದ ಉಚ್ಚಾಟಿಸಿರುವ ಹಿಂದೆ ಡಿಕೆಶಿ ಕೈವಾಡ ಇಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಸಮನ್ವಯಕಾರರಾಗಿದ್ದ ಸಲೀಂ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ಎಸ್. ಉಗ್ರಪ್ಪ ಸುದ್ದಿಗೋಷ್ಠಿ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕುರಿತು ಸಲೀಂ ನಡೆಸಿದ ಸಮಾಲೋಚನೆಯ ಆಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆ ಕಾಂಗ್ರೆಸ್ ಶಿಸ್ತು ಸಮಿತಿ ಇವರನ್ನು 6 ವರ್ಷಗಳ ಅವಧಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ಅದೇ ರೀತಿ ಮೂರು ದಿನಗಳ ಒಳಗೆ ಸ್ಪಷ್ಟೀಕರಣ ನೀಡುವಂತೆ ವಿ.ಎಸ್ ಉಗ್ರಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಡಿಕೆಶಿ ಅವರ ಧೂಳಿನ ಸಮಾನ ನಾನು
ಇಂದು ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಲೀಂ, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಅದರ ಅಧ್ಯಕ್ಷರಾದ ರೆಹಮಾನ್ ಖಾನ್ ಅವರು ಈ ಕ್ರಮ ಕೈಗೊಂಡಿದ್ದಾರೆ. ಇಲ್ಲಿ ಡಿಕೆಶಿ ಅವರ ಕೈವಾಡ ಇದೆ ಎಂದು ನಾನು ಹೇಳುವುದಿಲ್ಲ. ಡಿಕೆಶಿ ಅವರ ಧೂಳಿನ ಸಮಾನ ನಾನು. ಶಿಸ್ತು ಸಮಿತಿಗೆ ವರದಿ ಹೋದ ಹಿನ್ನೆಲೆ ನನ್ನನ್ನ ಉಚ್ಚಾಟಿಸಲಾಗಿದೆ. ಇಲ್ಲಿ ಬೇರೆ ಯಾವುದೇ ವ್ಯಕ್ತಿಯ ಕೈವಾಡ ಇಲ್ಲ ಎಂದು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ಅವರಿಗೆ ಅವಹೇಳನ ಮಾಡಿಲ್ಲ
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸದಾ ಪಕ್ಷಕ್ಕಾಗಿ ದುಡಿಯುತ್ತೇನೆ. ನನ್ನ ಉಚ್ಚಾಟನೆಯನ್ನು ವಾಪಸ್ ಪಡೆಯಬೇಕು ಎಂದು ಶಿಸ್ತು ಸಮಿತಿ ಮುಂದೆ ಮನವಿ ಮಾಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಶಿವಕುಮಾರ್ ಅವರಿಗೆ ಅವಹೇಳನ ಮಾಡಿಲ್ಲ. ಉಮೇಶ್ ವಿಚಾರವಾಗಿ ಮಾಡಿದ ಪ್ರಸ್ತಾಪ ಈ ರೀತಿ ಅಪಾರ್ಥ ಕಲ್ಪಿಸಿದೆ. ನಾನು ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿಚಾರವಾಗಿ ಪ್ರಸ್ತಾಪ ಮಾಡಿದ್ದೆ. ಆ ಮುಂದುವರಿದ ಭಾಗ ಮಾಧ್ಯಮಗಳಲ್ಲಿ ಪ್ರಸಾರವಾಗಿಲ್ಲ.
ಸಾಮಾಜಿಕ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ
ಡಿಕೆಶಿ ಮೇಲೆ ಐಟಿ ದಾಳಿ ನಡೆದ ಸಂದರ್ಭ ಅವರ ಪರವಾಗಿ ಹೋರಾಡಿದ್ದೆ. ಆದರೆ ಈಗ ಅವರೇ ನನ್ನ ಮೇಲೆ ಅನುಮಾನ ಪಡುವ ಸ್ಥಿತಿ ನಿರ್ಮಾಣವಾಗಿದೆ. ನಾನು ನಿಷ್ಠಾವಂತ ಹಾಗೂ ಪ್ರಾಮಾಣಿಕ ಎನ್ನುವುದನ್ನು ಹೇಗಾದರೂ ಸಾಬೀತು ಪಡಿಸುತ್ತೇನೆ. ಅಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ಸಾಮಾಜಿಕ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದು ವಿವರಿಸಿದ್ದಾರೆ.
ಕ್ಷಮೆ ಕೇಳಲು ಸಿದ್ಧ
ಮೊನ್ನೆಯ ಘಟನೆಯಿಂದ ನನಗೆ ತೀವ್ರ ಮುಜುಗರ ಉಂಟಾಗಿದೆ. ಯಾರಿಗೂ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ನಾನು ವಿನಮ್ರವಾಗಿ ಮನವಿ ಮಾಡುತ್ತಿದ್ದೇನೆ. ನಾನು ಯಾವುದೇ ರೀತಿ ಪಕ್ಷಕ್ಕಾಗಲೀ ಪಕ್ಷದ ಅಧ್ಯಕ್ಷರ ವರ್ಚಸ್ಸಿಗೆ ಧಕ್ಕೆ ತರುವ ಕಾರ್ಯ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷರ ಕ್ಷಮೆ ಕೇಳಲು ನಾನು ಸಿದ್ಧ. ಆದರೆ, ಅವರ ಬಳಿ ತೆರಳಿ ಮುಖ ತೋರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರವಾಗಿಯೇ ಕಾರ್ಯ ನಿರ್ವಹಿಸುತ್ತೇನೆ ಎಂದು ಸಲೀಂ ತಿಳಿಸಿದ್ದಾರೆ.
ಇದನ್ನೂ ಓದಿ: ನಾನು ಅಧ್ಯಕ್ಷರನ್ನು ಅವಹೇಳನ ಮಾಡಿಲ್ಲ, ಮುಜುಗರ ಉಂಟಾಗಿದ್ದರೆ ಕ್ಷಮೆ ಯಾಚಿಸುತ್ತೇನೆ : ಸಲೀಂ