ಮಹದೇವಪುರ (ಬೆಂಗಳೂರು): ಸರ್ಕಾರಿ ಅಧಿಕಾರಿಗಳ ಸಂಚಾರಕ್ಕೆ ಅನುಕೂಲವಾಗಲಿ ಎಂದು ಸರ್ಕಾರ ವಾಹನ ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ, ಕಾನೂನು ಸುವ್ಯವಸ್ಥೆ ಬಗ್ಗೆ ಸಮಾಜಕ್ಕೆ ತಿಳಿ ಹೇಳುವ ಪೊಲೀಸ್ ಅಧಿಕಾರಿಗಳ ವಾಹನಗಳ ವಿಮೆ, ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳ ಅವಧಿ ಮುಕ್ತಾಯಗೊಂಡು ವರ್ಷಗಳೇ ಕಳೆದರೂ ನವೀಕರಣಗೊಳಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು ನಗರದ ವೈಟ್ ಫೀಲ್ಡ್ ಉಪ ವಿಭಾಗದ ಕಾಡು ಗುಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸಂಚಾರಿ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಉಪಯೋಗಿಸುವ ವಾಹನಗಳ ವಿಮೆ ಕೊನೆಗೊಂಡಿದ್ದರೂ ನವೀಕರಿಸಿದೇ ವಾಹನಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಬೆಳತ್ತೂರು ನಿವಾಸಿ ಪರಮೇಶ್ ಹಾಗೂ ವಕೀಲ ಜಗನ್ ಕುಮಾರ್ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ.
ವೈಟ್ ಫೀಲ್ಡ್ ಉಪ ವಿಭಾಗದ ಡಿಸಿಪಿ ಬಳಸುವ ಇನ್ನೋವಾ ಕಾರು ಸಂಖ್ಯೆ KA 02 G 1290 ಹಾಗೂ ವೈಟ್ ಫೀಲ್ಡ್ ಠಾಣೆಯ ದ್ವಿಚಕ್ರ ಚೀತಾ ಮೋಟಾರು ಬೈಕ್ಗಳು ಹಾಗೂ ಕಾಡು ಗುಡಿ ಠಾಣೆಯ ಇನ್ಸ್ಪೆಕ್ಟರ್ ಬಳಸುವ ವಾಹನ ಸಂಖ್ಯೆ KA 02 G 1995 ಕೂಡ ವಿಮೆ ಅವಧಿ ಮುಗಿದಿದೆ. ಅದೇ ರೀತಿ ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಬಳಸುವ 10 ಕ್ಕೂ ಹೆಚ್ಚು ವಾಹನಗಳ ವಿಮೆ ಅವಧಿ ಮುಗಿದಿರುವುದು ಸರ್ಕಾರಿ ಅಪ್ಲಿಕೇಶನ್ ಎಂ ಪರಿವಾಹನ್ನಲ್ಲಿ ಕಂಡುಬಂದಿದೆ. ಇದರ ವಿರುದ್ದ ಆರ್ಟಿಐ ಕಾರ್ಯಕರ್ತರು ದೂರು ನೀಡಿದ್ದಾರೆ.
ಅಪಘಾತವಾದಲ್ಲಿ ಯಾರು ಹೊಣೆ?:
ವಿಮೆ ಮುಕ್ತಾಯಗೊಂಡು ಎರಡು ವರ್ಷಗಳು ಕಳೆಯುತ್ತಿದ್ದರೂ ವಿಮೆ ನವೀಕರಣಕ್ಕೆ ಮುಂದಾಗದ ಅಧಿಕಾರಿಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ಆಕಸ್ಮಿಕವಾಗಿ ಅಪಘಾತದಲ್ಲಿ ಮೃತ್ತಪಟ್ಟರೆ ಹಾಗೂ ಗಂಭೀರ ಸ್ವರೂಪದ ಗಾಯಗೊಂಡಲ್ಲಿ ಇದಕ್ಕೆ ಹೊಣೆ ಯಾರು ಎಂದು ಆರ್ಟಿಐ ಕಾರ್ಯಕರ್ತ ಬೆಳತ್ತೂರು ನಿವಾಸಿ ಪರಮೇಶ್ ಪ್ರಶ್ನಿಸಿದ್ದಾರೆ.
ಅನಗತ್ಯ ತಪಾಸಣೆ ಮತ್ತು ದಂಡ:
ತುರ್ತು ಪರಿಸ್ಥಿತಿಯಲ್ಲಿ ಮತ್ತು ಕೆಲಸ ಕಾರ್ಯಗಳಿಗೆ ತೆರಳುತ್ತಿರುವ ಸಂದರ್ಭದಲ್ಲಿ ವಾಹನ ಸವಾರರನ್ನು ತಪಾಸಣೆಗೆ ಒಳಪಡಿಸಿ ದಾಖಲೆಗಳು ಸರಿಯಿದ್ದರೂ, ಏನಾದರೂ ಒಂದು ದೋಷ ಹೇಳಿ ದಂಡ ವಸೂಲಿಗೆ ಮುಂದಾಗುತ್ತಾರೆ. ಸವಾರರು ತುರ್ತು ಪರಿಸ್ಥಿತಿ, ಒತ್ತಡ ಹೇಳಿಕೊಂಡರೂ, ಯಾವುದನ್ನೂ ಪರಿಗಣಿಸದೇ ದಂಡ ಹಾಕುತ್ತಾರೆ. ಆದರೆ ಇವರ ತಪ್ಪುಗಳನ್ನು ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ.
ತನಿಕೆಯಾಗಬೇಕು:
ಸರ್ಕಾರದ ವಾಹನಗಳಿಗೆ ವಿಮೆ ನವೀಕರಣಕ್ಕೆ ಪ್ರತಿ ವರ್ಷ ಹಣ ಬಿಡುಗಡೆ ಯಾಗುತ್ತಿದೆಯೋ ಇಲ್ಲವೋ?. ಹಣ ಬಿಡುಗಡೆಯಾದರೂ ಅಧಿಕಾರಿಗಳ ಹಣವನ್ನು ದುರ್ಬಳಕೆ ಮಾಡಿಕೊಂಡು ಕಟ್ಟುತ್ತಿದ್ದರೂ ಇಲ್ಲವೋ ಎಂಬುದನ್ನು ಸರ್ಕಾರ ತನಿಖೆ ಮಾಡಬೇಕಾಗಿದೆ ಎಂದರು.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಆರ್ಟಿಐ ಕಾರ್ಯಕರ್ತ ಪರಮೇಶ್, ಕಾನೂನು ಪಾಲನೆ ಮಾಡುವ ಪೊಲೀಸರೇ ತಪ್ಪು ಎಸಗಿದರೆ ದಂಡಿಸುವವರು ಯಾರು?. ಪ್ರತಿ ನಿತ್ಯ ಸಾವಿರಾರು ತಪಾಸಣೆ ಮಾಡುವ ಮತ್ತು ತಪ್ಪು ಮಾಡಿದದವರಿಗೆ ಬುದ್ದಿ ಮಾತು ಹೇಳುವ ಕಾನೂನಿನ ರಕ್ಷಕರೇ ವಾಹನಗಳ ವಿಮೆಯನ್ನು ನವೀಕರಿಸದೇ ಸಂಚರಿಸುವ ಮೂಲಕ ಅಸಡ್ಡೆ ತೊರುತ್ತಿದ್ದಾರೆ ಎಂದು ದೂರಿದರು.
ಪಾಠ ಮಾಡುವ ಮೇಷ್ಟ್ರುಗಳೇ ಪಾಠ ಕಲಿಯದಿದ್ದರೆ ಹೇಗೆ?:
ವಕೀಲ ಜಗನ್ ಕುಮಾರ್ ಮಾತನಾಡಿ, ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ವಾಹನಗಳ ವಿಮೆ ನವೀಕರಣಕ್ಕೆ ಹಣ ಬಿಡುಗಡೆಯಾಗಿದೆಯಾ?, ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದರಾ ಎಂದು ತನಿಖೆ ಮಾಡಿ ಹಗರಣ ಬಯಲು ಮಾಡಬೇಕು. ಪಾಠ ಮಾಡುವ ಮೇಷ್ಟ್ರುಗಳೇ ಪಾಠ ಕಲಿಯದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಕೆ.ಆರ್.ಪುರ ಸಂಚಾರಿ ಠಾಣೆಯಲ್ಲಿ 15ಕ್ಕೂ ಹೆಚ್ಚು ವಾಹನಗಳು ಇದ್ದು ಅದರಲ್ಲಿ 10 ಕ್ಕೂ ಹೆಚ್ಚು ವಾಹನಗಳ ವಿಮೆ ಅವಧಿ ಮುಕ್ತಾಯಗೊಂಡಿದ್ದು, ಇದರ ವಿರುದ್ದ ಈಗಾಗಲೇ ದೂರು ನೀಡಲಾಗಿದೆ. ಟ್ರಾಫಿಕ್ ಪೊಲೀಸರು ಮತ್ತು ಆರ್ಟಿಒ ಅಧಿಕಾರಿಗಳು ಯಾವುದೇ ಸರ್ಕಾರಿ ವಾಹನಗಳನ್ನ ತಪಸಣೆ ಮಾಡದ ಕಾರಣ ಈ ಅವ್ಯವಸ್ಥೆ ಕಂಡು ಬರುತ್ತಿದೆ. ಇದರ ವಿರುದ್ದ ಸೂಕ್ತ ತನಿಖೆ ನಡೆಯಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ: ಮನೆಯಿಂದ ಹೊರ ಬಂದು ಚಳಿಯಲ್ಲೇ ಕಾಲ ಕಳೆದ ಗ್ರಾಮಸ್ಥರು