ಬೆಂಗಳೂರು: ತಪ್ಪು ಮಾಹಿತಿ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ 400 ಕೋಟಿ ರೂ.ಗೂ ಹೆಚ್ಚು ಮೊತ್ತದ ಅನುದಾನ ಪಡೆದ ಬಿಬಿಎಂಪಿ ಗುತ್ತಿಗೆದಾರ ಎಂ.ಎಸ್.ವೆಂಕಟೇಶ್ ಎಂಬುವವರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ರಮೇಶ್ ಎನ್.ಆರ್. ಆಗ್ರಹಿಸಿದ್ದಾರೆ.
ಅಲ್ಲದೆ 2014-15ರಿಂದ 20-21ರವರೆಗಿನ ಅವಧಿಯ ಎಲ್ಲಾ ಕಾಮಗಾರಿಗಳ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ರಸ್ತೆಗುಂಡಿ ಮುಚ್ಚಲು ಹಾಟ್ ಬ್ಯಾಚ್ ಮಿಕ್ಸ್ ಪ್ಲಾಂಟ್ ಟೆಂಡರ್ ಪಡೆದಿತ್ತು. ಆದ್ರೆ ಈ ಕಂಪನಿ ಕಳಪೆ ಕಾಮಾಗಾರಿ ಮಾಡಿದೆ. ಈ ಹಿನ್ನೆಲೆ ಹೈಕೋರ್ಟ್ ಆದೇಶದಂತೆ ಟೆಂಡರ್ ರದ್ದು ಮಾಡಲಾಗಿದೆ. ಆದರೆ ನಿಯಮ ಅನುಸಾರವಾಗಿ ಕಪ್ಪುಪಟ್ಟಿಗೆ ಸೇರಿಸಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೆ ಗುತ್ತಿಗೆದಾರ ವೆಂಕಟೇಶ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಜಮೀರ್ ಅಹ್ಮದ್ ಬೆಂಬಲ ಇದೆ. ಗುತ್ತಿಗೆದಾರನ ಬಿಡ್ ಸಾಮರ್ಥ್ಯ 108.88 ಕೋಟಿ ರೂ. ಆಗಿದ್ದರೂ 380 ಕೋಟಿ ರೂ. ಹೆಚ್ಚು ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ರಮೇಶ್ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.