ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಒಂದಲ್ಲ ಒಂದು ಗೊಂದಲ, ಸಮಸ್ಯೆಗಳು ಇದ್ದೇ ಇರುತ್ತವೆ. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತಾಗಿ ವಿದ್ಯಾರ್ಥಿಗಳಂತೂ ವಿವಿಯನ್ನು ನಂಬಿ ಓದುವುದು ಹೇಗೋ ಏನೋ ನಿಜಕ್ಕೂ ಗೊತ್ತಿಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ. 2016ರ ಬ್ಯಾಚ್‌ನಲ್ಲಿ ಪದವಿಗೆ ಸೇರಿದ್ದ ವಿದ್ಯಾರ್ಥಿಗಳು ಬ್ಯಾಕ್‌ಲಾಗ್ ಪರೀಕ್ಷೆ ಬರೆಯಲು ಬಂದಿದ್ದರು. ಅವರಿಗೆ ನಿಮ್ಮ ಪರೀಕ್ಷೆ ಮುಗಿದಿದೆ ಎಂಬ ಉತ್ತರ ಕೇಳಿ ಶಾಕ್ ಆಗಿದೆ.
2019ರಲ್ಲಿ ಪದವಿ ಮುಗಿಸಿದ ಇವರಿಗೆ ಬ್ಯಾಕ್‌ಲಾಗ್ ಪರೀಕ್ಷೆಯನ್ನು 2021ರ ಒಳಗೆ ಮುಗಿಸಿಕೊಳ್ಳಬೇಕು ಎಂಬ ನಿಯಮ ಇದೆ. ಕೋವಿಡ್ ಕಾರಣ ಅವಧಿ ಮುಂದುವರೆದು ಈ ಬಾರಿ ಕಡೆಯ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿಯ ಟೈಮ್ ಟೇಬಲ್ನಲ್ಲಿ ಆದ ತಪ್ಪಿನಿಂದ ಪರೀಕ್ಷೆ ಬರೆಯದಂತಾಗಿದೆ. 5ನೇ ಸೆಮಿಸ್ಟರ್‌ನ ವಿಷಯವಾಗಿರೋ Advanced Accounting ಪರೀಕ್ಷೆ ವಿಚಾರವಾಗಿ ತೀವ್ರವಾದ ಗೊಂದಲ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಏಪ್ರಿಲ್ 1 ರಂದು Elective Paper 1 ರ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 5ರಂದು Elective Paper 1 Advanced Accounting ಎಂದು ನಮೂದು ಮಾಡಲಾಗಿದೆ. ಬ್ಯಾಕ್‌ಲಾಗ್ ಇದ್ದ ವಿದ್ಯಾರ್ಥಿಗಳು ಇಂದು ತಮ್ಮ ಪರೀಕ್ಷೆ ಇದೆ ಅಂತ ಕೇಂದ್ರಗಳತ್ತ ಹೋದಾಗ ನಿಮ್ಮ ಪರೀಕ್ಷೆ ಏಪ್ರಿಲ್ 1ರಂದೇ ನಡೆದುಹೋಗಿದೆ ಎಂದಿದ್ದಾರಂತೆ. ಇಂದು ಇದ್ದ ಪರೀಕ್ಷೆ ಕೇವಲ ಫ್ರೆಶರ್‌ಗಳಿಗೆ, ನೀವೆಲ್ಲಾ ರೀಪೀಟರ್ಸ್ ಆಗಿರೋದ್ರಿಂದ 1ನೇ ತಾರಿಖಿನಂದೇ ಮುಗಿದುಹೋಗಿದೆ ಎಂದಿದ್ದಾರಂತೆ. ಅತ್ತ ಕಾಲೇಜುಗಳಿಂದಲೂ ಸೂಕ್ತ ಮಾಹಿತಿ ಇಲ್ಲದೇ, ಬೆಂಗಳೂರು ವಿವಿಯಿಂದಲೂ ಮಾಹಿತಿಯಿಲ್ಲದೇ ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿ ಉಂಟಾಗಿದೆ.
3 ವರ್ಷದ ಡಿಗ್ರೀ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಇದ್ದ ಕೊನೆಯ ಚಾನ್ಸ್ ಇದಾಗಿತ್ತು. ಇದನ್ನು ಯೂನಿವರ್ಸಿಟಿಯ ತಪ್ಪಿನಿಂದಾಗಿ ಕಳೆದುಕೊಂಡಿದ್ದಾರೆ. ಮತ್ತೆ ಇವರು ಪರೀಕ್ಷೆ ಬರೆಯಬೇಕಂದ್ರೆ 4 ವರ್ಷದ ಕೋರ್ಸ್‌ಗೆ ಹೊಸ ಅಡ್ಮೀಶನ್ ಪಡೆಯಬೇಕಿದೆ. ಒಟ್ಟಾರೆ ಬೆಂಗಳೂರು ವಿವಿ ಆಡಳಿತ ವರ್ಗ ಕೇವಲ ಅಧಿಕಾರ ಉಳಿಸಿಕೊಳ್ಳುವ ಓಡಾಟದ ಕೆಲಸದಲ್ಲೇ ನಿರತವಾದಂತೆ ಇದೆ. ಹೀಗಾಗಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಲ್ಲಿ ಕಂಡು ಕಾಣದಂತೆ ಇದೆ ಎಂದು ನೊಂದ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: ಏ. 8 ರಂದು ಬೆಂಗಳೂರು-ತುಮಕೂರು ನಡುವೆ ಮೆಮು ರೈಲು ಸಂಚಾರಕ್ಕೆ ಚಾಲನೆ