ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನಡುಕ ಉಂಟುಮಾಡಿದ ಶಾಸಕರಲ್ಲಿ ಪ್ರಮುಖರಾದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು, ಇಂದು ನಡೆದ ಸಿಎಲ್ಪಿ ಸಭೆಗೂ ಹಾಜರಾಗಿಲ್ಲ.
ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಹಿನ್ನೆಲೆ ನಾನು ಸಭೆಗೆ ಹಾಜರಾಗಲಿಲ್ಲ. ಸ್ಪೀಕರ್ ನೋಟಿಸ್ ನೀಡಿದ ನಂತರ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಸದ್ಯಕ್ಕೆ ನಾನು ಕಾಂಗ್ರೆಸ್ ಪಕ್ಷದ ಸದಸ್ಯ ಅಷ್ಟೇ. ಸೌಮ್ಯ ರೆಡ್ಡಿ ಬಗ್ಗೆ ಅವರನ್ನೇ ಕೇಳುವುದು ಸೂಕ್ತ. ನಾನು ಸಚಿವ, ಡಿಸಿಎಂ, ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ನಾನಿನ್ನೂ ಕಾಂಗ್ರೆಸ್ನಲ್ಲೇ ಇದ್ದು, ಶಾಸಕ ಸ್ಥಾನಕ್ಕಷ್ಟೇ ರಾಜೀನಾಮೆ ನೀಡಿದ್ದೇನೆ ಎಂದರು.
ಇಂದು ಬೆಳಗ್ಗೆ ಬಿಜೆಪಿ ನಾಯಕರು ನನ್ನ ಮನೆಗೆ ಭೇಟಿ ನೀಡಿದ್ದು ರಾಜಕೀಯ ಚರ್ಚೆಗಾಗಿ ಅಲ್ಲ. ರೆಡ್ಡಿ ಸಮುದಾಯದ ಚುನಾವಣೆ ಇದೇ ತಿಂಗಳು 18ರಂದು ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ಚರ್ಚೆ ನಡೆಯಿತು ಅಷ್ಟೇ ಎಂದು ಹೇಳಿದರು.