ನೆಲಮಂಗಲ: ಹೆಚ್ಚು ಹಣ ಸಂಪಾದನೆ ಮಾಡಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಶಿಕ್ಷಕ ವೃತ್ತಿ ಬಿಟ್ಟು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟಿದ್ದ ವ್ಯಕ್ತಿಯೊಬ್ಬ ನಗರದ ಹೊರವಲಯದ ಬಡಾವಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಉದ್ಯಮಿ ಸತೀಶ್ ನೆಲಮಂಗಲ ತಾಲ್ಲೂಕಿನ ಕುಲವನಹಳ್ಳಿ ಸಮೀಪದ ಲಕ್ಕಸಂದ್ರ ಮೂಲದವರು. ಈ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸುತ್ತಿದ್ದ ಸತೀಶ್, ಕುಟುಂಬಕ್ಕೆ ಒಳ್ಳೆ ಜೀವನ ರೂಪಿಸಲು ಶಿಕ್ಷಕ ವೃತ್ತಿ ತೊರೆದು ನೆಲಮಂಗಲ ನಗರದ ದಾನೋಜಿ ಪಾಳ್ಯದಲ್ಲಿ ವಾಸವಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸತೀಶ್ ವ್ಯವಹಾರ ಚೆನ್ನಾಗಿಯೇ ನಡೆಯುತ್ತಿತ್ತು. ತನ್ನ ಉದ್ಯಮದ ಏಳಿಗೆಗಾಗಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆಗೆ ತವರುಮನೆಗೆ ಹೊರಟಿದ್ದ ಪತ್ನಿ ಕಮಲರನ್ನ ಬಸ್ ಹತ್ತಿಸಲು ಹೋಗಿದ್ದರು. ಬಳಿಕ ಸತೀಶ್ ನೆಲಮಂಗಲ ನಗರದ ರಾಶಿ ಗೇಟ್ವೇ ಬಡಾವಣೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಿರ್ಜನ ಪ್ರದೇಶದ ಬಡಾವಣೆಯಲ್ಲಿ ಕುರಿ ಮೇಯಿಸುತ್ತ ಬಂದ ಕುರಿಗಾರನು ಮೃತ ದೇಹ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಉದ್ಯಮಿ ಸತೀಶ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಕುಡಿದು ಸಾವನ್ನಪ್ಪಿರುವ ಶಂಕೆಯನ್ನ ಆರಂಭದಲ್ಲಿ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ವೇಳೆ ಮೃತದೇಹದ ಮೇಲಿದ್ದ ಸುಟ್ಟ ಗಾಯಗಳ ಗುರುತು ಕಂಡ ಸತೀಶ್ ಕುಟುಂಬಸ್ಥರು ಇದು ಸಹಜ ಸಾವಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸದಾ ಕುಟುಂಬದೊಂದಿಗೆ ಸಂತಸದಿಂದಿರುವ ಮತ್ತು ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ಸತೀಶ್ ಏಕಾಏಕಿ ಊರ ಹೊರಗೆ ಹೆಣವಾಗಿ ಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾರೋ ದುಷ್ಕರ್ಮಿಗಳು ಬೇರೆಡೆ ಕೊಲೆಗೈದು ನಿರ್ಜನ ಬಡಾವಣೆಯಲ್ಲಿ ತಂದು ಎಸೆದಿದ್ದಾರೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿಯ ಸಾವು ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.