ಬೆಂಗಳೂರು: ರೇಷನ್ ಕಾರ್ಡ್ ಇಲ್ಲದೇ ಇದ್ದರೂ ಬಡವರಿಗೆ ಪಡಿತರ ನೀಡಬೇಕು. ರೈತರ ಬೆಳೆ ಖರೀದಿಸಿ ಹಾಪ್ ಕಾಮ್ಸ್ ಮೂಲಕ ಮಾರಾಟ ಮಾಡಬೇಕು ಎಂದು ಎಲ್ಲಾ ಜಿಲ್ಲಾಡಳಿತಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಸಿಎಂ, ಲಾಕ್ಡೌನ್ ಪರಿಸ್ಥಿತಿ ಹಾಗೂ ಕೋವಿಡ್-19 ನಿಯಂತ್ರಣ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೇ ರೇಷನ್ ಕಾರ್ಡ್ ಇಲ್ಲದಿದ್ದರೂ ರೇಷನ್ ನೀಡಬೇಕು. ರೈತರು ಬೆಳೆದ ಬೆಳೆಗಳನ್ನ ಖರೀದಿ ಮಾಡಿ ಹಾಪ್ ಕಾಮ್ಸ್ ಮೂಲಕ ಮಾರಾಟ ಮಾಡಬೇಕು. ಇನ್ನು ಕೆಲವು ದಿನಗಳಲ್ಲಿ ಮಳೆ ಬೀಳಲಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಯಾವ ರೈತರೂ ಸಹ ತಾವು ಬೆಳೆದ ತರಕಾರಿಗಳನ್ನ ರಸ್ತೆಗೆ ಹಾಕುವಂತಾಗಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅಲ್ಲದೇ ರೈತರು ಬೆಳೆದ ತರಾಕರಿ, ಹಣ್ಣುಗಳನ್ನು ಖರೀದಿ ಮಾಡಿ ಬೆಳೆ ನಾಶ ಆದಂತಹ ಸಂದರ್ಭದಲ್ಲಿ ಪರಿಹಾರ ಕೊಡಲೇಬೇಕು. ಈ ಬಗ್ಗೆ ಪಟ್ಟಿ ಮಾಡಿ ವರದಿ ನೀಡುವಂತೆ ಸಿಎಂ ಸೂಚನೆ ನೀಡಿದರು.