ದಾವಣಗೆರೆ: ಕೊರೊನಾ ಶತಕದ ಅಂಚಿಗೆ ತಲುಪಿದ್ದ ಗ್ರಾಮ ಇದೀಗ ಕೊರೊನಾ ಮುಕ್ತವಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮ ಕೊರೊನಾ ಮುಕ್ತವಾಗಿದ್ದು, ಗ್ರಾಮಸ್ಥರು ಸಂತಸದಲ್ಲಿದ್ದಾರೆ.
20 ದಿನಗಳ ಹಿಂದೆ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯಮಟ್ಟದಲ್ಲಿ ಈ ಗ್ರಾಮ ಸುದ್ದಿಯಾಗಿತ್ತು. ಅದ್ರೆ ಇದೀಗ ಅಧಿಕಾರಿಗಳ ಶ್ರಮದ ಫಲವಾಗಿ ಇಡೀ ಗ್ರಾಮವೀಗ ಸೋಂಕು ಮುಕ್ತವಾಗಿದೆ.
ಮೇ 26ಕ್ಕೆ ಕೊನೆಯ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ವಾರದಿಂದ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಒಟ್ಟು 1591 ಜನಸಂಖ್ಯೆ ಹೊಂದಿದ್ದ ರಾಮೇಶ್ವರ ಗ್ರಾಮದಲ್ಲಿ 94 ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ವು. 6 ಜನ ಸೋಂಕಿಗೆ ಬಲಿಯಾಗಿದ್ದರು. ಮೇ 6 ರಂದು ರಾಮೇಶ್ವರ ಗ್ರಾಮದ ಅರ್ಧಕ್ಕೆ ಅರ್ಧ ಊರಿನ ಜನರು ಕೆಮ್ಮು, ನೆಗಡಿ, ಶೀತದಿಂದ ಬಳಲುತ್ತಿದ್ದರು.
ಈ ವೇಳೆ ಶಾಸಕ ರೇಣುಕಾಚಾರ್ಯ ಮತ್ತು ಅಧಿಕಾರಿಗಳು ಜನರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಿದ್ರು. ಪರೀಕ್ಷೆ ಮಾಡಿಸಿದ ಬಳಿಕ ಸೋಂಕು ತಗುಲಿದವರನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ, ಮಾದನಬಾವಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ರಾಮೇಶ್ವರದಲ್ಲಿ ನಿರಂತರ ಕೋವಿಡ್ ಟೆಸ್ಟ್, ಸ್ಯಾನಿಟೈಸ್ ಸೋಂಕಿತರನ್ನ ಮನವೊಲಿಸಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಿದ್ದೇ ಈ ಗ್ರಾಮ ಸೋಂಕು ಮುಕ್ತವಾಗಲು ಪ್ರಮುಖ ಕಾರಣವಾಗಿದೆ.