ಬೆಂಗಳೂರು: ರಮೇಶ್ ವಿದ್ಯಾವಂತ, ಸಾರ್ವಜನಿಕ ಜೀವನದಲ್ಲಿ ನಾಯಕರ ಜೊತೆ ಗುರುತಿಸಿಕೊಂಡಿದ್ದರು. ಐಟಿ ದಾಳಿ ಕಿರಿಕುಳದಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಗಡಿ ಶಾಸಕ ಎ.ಮಂಜು ಆರೋಪಿಸಿದ್ದಾರೆ.
ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಅವರ ಮೃತದೇಹದ ಶವ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಆಸ್ಪತ್ರೆಗೆ ಆಗಮಿಸಿದ ಎ.ಮಂಜು ಮೃತದೇಹ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಅಷ್ಟು ಧೈರ್ಯ ಕಳೆದುಕೊಂಡಿದ್ದಾನೆ ಅಂದರೆ ಐಟಿ ಕಿರುಕುಳದ ಬಗ್ಗೆ ನನಗೂ ಅನುಮಾನ ಕಾಡುತ್ತಿದೆ. ನಡೆದ ಘಟನೆ ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಆತ ನನ್ನ ಕ್ಷೇತ್ರದ ಮತದಾರ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಜೊತೆ ಕೆಲಸ ಮಾಡಿಕೊಂಡಿದ್ದರು. ಪ್ರೀತಿ ಪಾತ್ರದ ವ್ಯಕ್ತಿ ನಮ್ಮನ್ನ ತೊರೆದಿರುವುದು ತುಂಬಾ ನೋವಾಗಿದೆ. ಡೆತ್ ನೋಟಿನಲ್ಲೂ ಐಟಿ ದಾಳಿಯ ಬಗ್ಗೆಯೇ ಮೊದಲ ಸಾಲಿನಲ್ಲಿ ಉಲ್ಲೇಖಿಸಿದ್ದಾನೆ. ಇದನ್ನು ನೋಡಿದರೆ ಐಟಿ ದಾಳಿಯಿಂದ ರಮೇಶ್ ಎಷ್ಟು ನೊಂದಿದ್ದಾರೆ ಅಂದರೆ ಅವರ ಸಾವಿನಿಂದ ಗೊತ್ತಾಗುತ್ತೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಐಟಿ ದಾಳಿ ಮಾಡಲಾಗುತ್ತಿದೆ. ಅಧಿಕಾರಿಗಳು ಬೆಂಗಳೂರಿಗೆ ಬರುವಂತ ಸಂದರ್ಭದಲ್ಲಿ ಯಾರು ಯಾರನ್ನು ಭೇಟಿಯಾಗಿದ್ದಾರೆ. ಯಾರ ಕೈಚಳಕದಿಂದ ಇವೆಲ್ಲ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಅಲ್ಲದೆ ಐಟಿ ದಾಳಿ ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಎನಿಸುತ್ತಿದೆ. ಬಿಜೆಪಿ ನಾಯಕರ ಮಾಲೀಕತ್ವದಲ್ಲಿ ಕಾಲೇಜುಗಳಿಲ್ವೆ.. ಅವರ ಮೇಲೆ ಏಕೆ ದಾಳಿಯಾಗಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಎಲ್ಲ ಮೆಡಿಕಲ್ ಕಾಲೇಜುಗಳಲ್ಲೂ ಸೀಟುಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾತು ಈಗಲೂ ಚಾಲ್ತಿಯಲ್ಲಿದೆ. ಅವೆಲ್ಲ ಐಟಿ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಎ.ಮಂಜು ಪ್ರಶ್ನಿಸಿದರು.
ತನ್ನ ಪುಟ್ಟ ಮಕ್ಕಳನ್ನ ಬಿಟ್ಟು ಸಾವನಪ್ಪಿದ್ದಾರೆ. ಇನ್ನು ಮುಂದೆ ಆ ಕುಟುಂಬಕ್ಕೆಆಸರೆ ಯಾರಾಗ್ತಾರೆ. ಐಟಿ ದಾಳಿ ಉದ್ದೇಶ ಪೂರ್ವಕವಾಗಿದೆ. ಅವರ ದಾಳಿಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.