ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಕಳೆದ ಎರಡು ದಿನಗಳಿಂದ ನಗರದಲ್ಲಿ ವರುಣನ ಆರ್ಭಟ ಜೋರಾಗಿದೆ. ಗುರುವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಹಲವು ಸ್ಥಳಗಳಲ್ಲಿ ಮರಗಳು ಧರೆಗುರುಳಿರುವುದು ಬೆಳಕಿಗೆ ಬಂದಿದೆ. ಮಳೆಗೆ ಇಡೀ ಬೆಂಗಳೂರು ತತ್ತರಿಸಿದೆ. ರಸ್ತೆಗಳು ನದಿಯಂತಾಗಿ ವಾಹನ ಸವಾರರು ಪರದಾಡಿದ ದೃಶ್ಯ ಸಾಮಾನ್ಯವಾಗಿತ್ತು.
50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರಿನಿಂದ ಹಾನಿ: ಸಿಲಿಕಾನ್ ಸಿಟಿಯ ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತ 50ಕ್ಕೂ ಹೆಚ್ಚು ಮನೆಗಳಿಗೆ ತಡ ರಾತ್ರಿ ಮಳೆ ನೀರು ನುಗ್ಗಿ ಅಕ್ಕಿ, ಬೇಳೆ ಸೇರಿದಂತೆ ದಿನಬಳಕೆ ವಸ್ತುಗಳು ಹಾಳಾಗಿವೆ. ಭಾರಿ ಮಳೆಗೆ ಚರಂಡಿ ಹೊರಗಡೆ ಬಂದು ಕಾರುಗಳು ದ್ವಿಚಕ್ರ ವಾಹನಗಳು ಕೊಚ್ಚಿ ಹೋಗಿರುವುದು ಸಹ ಬೆಳಕಿಗೆ ಬಂದಿದೆ.
ಉತ್ತರಹಳ್ಳಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜನರು ಅಹೋರಾತ್ರಿ ಜಾಗರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ವಸ್ತುಗಳು ನೀರು ಪಾಲಾಗಿವೆ. ಚಾಮರಾಜಪೇಟೆಯಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ.
ಕೊಚ್ಚಿಹೋದ ವಾಹನಗಳು: ಕಾಮಾಕ್ಯ ಬಡಾವಣೆಯಲ್ಲಿ ನೀರಿನಲ್ಲಿ ಕಾರು ಬೈಕ್ಗಳು ರಸ್ತೆಯಲ್ಲಿ, ತಗ್ಗು ಗುಂಡಿಗಳಲ್ಲಿ ಬಂದು ನಿಂತಿವೆ. ಕಾರಿನ ಮೇಲೆ ಮತ್ತೊಂದು ಕಾರು ಬಂದು ನಿಂತಿರುವುದು ಸಹ ಕಂಡುಬಂದಿದೆ. ಒಟ್ಟಿನಲ್ಲಿ ವಾಹನಗಳಿಗೆ ತಡರಾತ್ರಿಯ ಮಳೆಯಿಂದ ಸಾಕಷ್ಟು ಹಾನಿಯಾಗಿದೆ.
ರಾಜಧಾನಿಯ ಬಹುತೇಕ ಕಡೆ ಮಳೆ: ವಿಜಯನಗರ, ಬಸವೇಶ್ವರ ನಗರ, ಮಲ್ಲೇಶ್ವರ, ಶಾಂತಿನಗರ, ಕೋರಮಂಗಲ, ಇಂದಿರಾ ನಗರ, ಮೆಜೆಸ್ಟಿಕ್, ಯಶವಂತಪುರ, ಜಾಲಹಳ್ಳಿ, ಪೀಣ್ಯಾ, ದಾಸರಹಳ್ಳಿ, ಸುಂಕದಕಟ್ಟೆ ಸೇರಿದಂತೆ ರಾಜಧಾನಿಯ ಬಹುತೇಕ ಕಡೆ ಸಂಜೆ 8ರಿಂದ ತಡರಾತ್ರಿಯವರೆಗೂ ಭಾರಿ ಮಳೆ ಸುರಿದಿರುವುದು ವರದಿಯಾಗಿದೆ.
ಇದನ್ನೂ ಓದಿ: ಬೆಂಗಳೂರು: ಮಳೆಗೆ ತಗ್ಗು ಪ್ರದೇಶಗಳು ಜಲಾವೃತ, ವಿದ್ಯುತ್ ಕಡಿತ