ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನಾಲ್ಕು ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡಗಳನ್ನು ಮಂಜೂರು ಮಾಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೊನ್ನೆ ನಡೆದ ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜ್ಯಕ್ಕೆ ಕಾಯಂ ಆಗಿ ನಾಲ್ಕು ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ಒದಗಿಸುವಂತೆ ಕೋರಿದ್ದೆವು. ಇದೀಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ನಾಲ್ಕು ತಂಡಗಳನ್ನು ಮಂಜೂರು ಮಾಡಿದೆ. ಈ ನಾಲ್ಕು ಹೆಚ್ಚುವರಿ ತಂಡಗಳು ಕಲಬುರ್ಗಿ, ಬಾಗಲಕೋಟೆ, ರಾಯಚೂರು ಮೈಸೂರಿನಲ್ಲಿ ನಿಯೋಜನೆಗೊಳ್ಳಲಿದ್ದು, ಮುಂದೆ ಆಗುವ ಅನಾಹುತವನ್ನು ನಿಭಾಯಿಸಲಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ನಾಲ್ಕು ಎನ್‌ಡಿಆರ್‌ಎಫ್ ತಂಡಗಳಿದ್ದು, ಬೆಳಗಾವಿ, ಕೊಡಗು ಹಾಗೂ ಉಡುಪಿ ಜಿಲ್ಲೆಯಲ್ಲಿ ನಿಯೋಜನೆಗೊಳಿಸಲಾಗಿದೆ. ಹೆಚ್ಚುವರಿ ನಾಲ್ಕು ತಂಡ ಮಂಜೂರು ಮಾಡುವ ಮೂಲಕ ಇದೀಗ ರಾಜ್ಯದಲ್ಲಿ ಒಟ್ಟು ಎಂಟು ಎನ್‌ಡಿಆರ್‌ಎಫ್ ತಂಡಗಳು ನಿಯೋಜನೆಗೊಂಡಿವೆ ಎಂದರು.
ನೆರೆಹಾನಿ ಸಂಬಂಧ ಪಿಎಂಗೆ ಪತ್ರ: ಇದೇ ವೇಳೆ ರಾಜ್ಯದ ನೆರೆಹಾನಿ ಸಂಬಂಧ ಪ್ರಧಾನಿಗೆ ವಿಸ್ತೃತ ಪತ್ರ ಬರೆದಿದ್ದೇನೆ. ರಾಜ್ಯದಲ್ಲಿ ಏನೇನು ಅನಾಹುತವಾಗಿದೆ. ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ವಿಸ್ತೃತವಾಗಿ ಪತ್ರ ಬರೆದಿದ್ದೇನೆ. ಇದರ ಜೊತೆಗೆ ಮೊನ್ನೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಸ್ತಾಪಿಸಲಾದ ವಿಚಾರಗಳ ಬಗ್ಗೆಯೂ ಪ್ರಧಾನಿ ಹಾಗೂ ಗೃಹ ಇಲಾಖೆಗೆ ಪತ್ರ ಬರೆದಿದ್ದೇನೆ ಎಂದು ವಿವರಿಸಿದರು.