ಬೆಂಗಳೂರು : ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಪ್ರವೇಶ ಮಾಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚೊಚ್ಚಲ ಚಿತ್ರಕ್ಕೆ ಸಂಗೀತ ನೀಡಿದ್ದ ಗುರುಕಿರಣ್ ಹುಟ್ಟಹಬ್ಬದ ಸಮಾರಂಭವೇ ಕಡೆಯ ಸಮಾರಂಭವಾಗಿದ್ದು ಕಾಕತಾಳಿಯವಾಗಿದೆ.
ನಿನ್ನೆಯಷ್ಟೇ ಸಂಗೀತ ನಿರ್ದೇಶಕ ಗುರುಕಿರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಮಾರಂಭಕ್ಕೆ ನಟ ಪುನೀತ್ ರಾಜ್ ಕುಮಾರ್ ಕೂಡ ತೆರಳಿದ್ದರು.
ರಮೇಶ್ ಅರವಿಂದ್ ಜೊತೆ ಗುರುಕಿರಣ್ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅಪ್ಪು, ಗುರುಕಿರಣ್ಗೆ ಹುಟ್ಟುಹಬ್ಬದ ಶುಭ ಕೋರಿದ್ದರು. ಕೆಲ ಸಮಯ ಪಾರ್ಟಿಯಲ್ಲಿ ಭಾಗವಹಿಸಿ ಹರಟೆ ಹೊಡೆದಿದ್ದರು. ಆದರೆ, ಈ ಪಾರ್ಟಿಯೇ 'ಯುವರತ್ನ'ನ ಕೊನೆಯ ಪಾರ್ಟಿಯಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ.
ಮೊದಲ ಸಂಗೀತ ನಿರ್ದೇಶಕನ ಕೊನೆ ಪಾರ್ಟಿ: ನಾಯಕ ನಟನಾಗಿ 2002ರಲ್ಲಿ 'ಅಪ್ಪು' ಚಿತ್ರದ ಮೂಲಕ ಪುನೀತ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಬಾಲನಟನಾಗಿ ನಟಿಸಿದ್ದ ಪುನೀತ್ಗೆ 'ಅಪ್ಪು' ಸಿನಿಮಾ ನಾಯಕ ನಟನಾಗಿ ಮೊದಲ ಸಿನಿಮಾ. ಈ ಸಿನಿಮಾಗೆ ಸಂಗೀತ ನೀಡಿದ್ದು ಗುರುಕಿರಣ್.
ಈ ಚಿತ್ರದ ಸಂಗೀತ ಇಂದಿಗೂ ಅಭಿಮಾನಿಗಳ ಬಾಯಲ್ಲಿ ಗುನುಗುತ್ತಲೇ ಇದೆ. ಗುರುಕಿರಣ್ ಜೊತೆಗಿನ ಅಪ್ಪು ಬಾಂಧವ್ಯವೂ ಹಾಗೆಯೇ ಇದೆ. ಹಾಗಾಗಿ, ಗುರು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಪುನೀತ್ ತೆರಳಿದ್ದರು. ಆದರೆ, ಈ ಪಾರ್ಟಿಯೇ ಅಪ್ಪು ಭಾಗವಹಿಸಿದ ಕಡೆಯ ಪಾರ್ಟಿಯಾಗಿದೆ.
ಇಂದು ಸಿಎಂ ಭೇಟಿ ಮಾಡಬೇಕಿದ್ದ ಪುನೀತ್: ನವೆಂಬರ್ 1ರಂದು ವೆಬ್ ಸೈಟ್ ಉದ್ಘಾಟಿಸುವಂತೆ ಆಹ್ವಾನ ನೀಡಲು ಆಗಮಿಸುತ್ತೇನೆ ಎಂದು ಸಿಎಂ ಭೇಟಿಗೆ ಪುನೀತ್ ರಾಜ್ ಕುಮಾರ್ ಕಾಲಾವಕಾಶ ಕೋರಿದ್ದರು. ಇಂದು ಭೇಟಿ ನೀಡಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.