ಬೆಂಗಳೂರು : ಬಾಲನಟರಾಗಿ ಸಿನಿಮಾ ರಂಗಕ್ಕೆ ಬಂದು ಹೀರೋ ಆಗಿ ಅತ್ಯಂತ ಯಶಸ್ಸು ಕಂಡವರು ಬೆರಳೆಣಿಕೆಯಷ್ಟು ಮಂದಿ. ಇದರಲ್ಲಿ ಪುನೀತ್ ರಾಜ್ಕುಮಾರ್ ಪ್ರಮುಖವಾಗಿ ನಿಲ್ಲುತ್ತಾರೆ.
ಮಾಸ್ಟರ್ ಲೋಹಿತ್ ಹೆಸರಿನಲ್ಲಿ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಪ್ಪು, 1976ರಲ್ಲಿ ತೆರೆ ಕಂಡ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಆರು ತಿಂಗಳ ಮಗುವಾಗಿದ್ದಾಗಲೇ ತೆರೆ ಮೇಲೆ ಕಾಣಿಸಿದ್ದರು. ನಂತರ ಮಾಸ್ಟರ್ ಲೋಹಿತ್ ಆಗಿ ಹಲವಾರು ಚಿತ್ರಗಳಲ್ಲಿ ತಂದೆ ರಾಜ್ಕುಮಾರ್ ಜತೆ ನಟಿಸಿ ರಾಷ್ಟ್ರ ಪ್ರಶಸ್ತ್ರಿಗೂ ಭಾಜನರಾಗಿದ್ದರು.
'ಅಪ್ಪು' ಚಿತ್ರದ ಮೂಲಕ ರೀ ಎಂಟ್ರಿ : 'ಪರುಶುರಾಮ್' ಚಿತ್ರದಲ್ಲಿ ಬಾಲನಟನಾಗಿ ತಂದೆ ಜತೆ ನಟಿಸಿದ್ದರು. ಅದು ಕೊನೆ ಚಿತ್ರವಾಗಿತ್ತು. ನಂತರ ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಲೋಹಿತ್, 2002ರಲ್ಲಿ 'ಅಪ್ಪು' ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದರು. ಆ ಚಿತ್ರದ ಮೂಲಕ ಪುನೀತ್ ರಾಜ್ಕುಮಾರ್ ಆಗಿ ಹೆಸರು ಬದಲಾಯಿತು.
ಹೆಸರು ಬದಲಿಸಿಕೊಂಡರೆ ಅದೃಷ್ಟ ಬರುವದೆಂಬ ನಂಬಿಕೆ : ಡಾ. ರಾಜ್ಕುಮಾರ್ ಕುಟುಂಬದಲ್ಲಿ ಬಹುತೇಕ ಮಂದಿ ಸಿನಿಮಾಕ್ಕಾಗಿ ಹೆಸರು ಬದಲಿಸಿಕೊಂಡಿದ್ದಾರೆ. ಹೆಸರು ಬದಲಾಯಿಸಿಕೊಂಡರೆ ಅದೃಷ್ಟ ಬರುವುದೆಂಬ ನಂಬಿಕೆ ಆ ಕುಟುಂಬದ್ದು. ಹಾಗಾಗಿಯೇ, ಸಿನಿಮಾ ರಂಗದಲ್ಲಿರುವ ರಾಜ್ ಕುಟುಂಬದ ಎಲ್ಲ ಸದಸ್ಯರು ಹೆಸರು ಬದಲಿಸಿಕೊಂಡಿರುವುದು ಗಮನಾರ್ಹ ಸಂಗತಿ.
- ರಾಜ್ ಕುಟುಂಬದ ಸದಸ್ಯರ ಹೆಸರುಗಳನ್ನು ಗಮನಿಸುವುದಾದರೆ, ಮೊದಲಿಗೆ ರಾಜ್ಕುಮಾರ್ ಹೆಸರು 'ಮುತ್ತುರಾಜ್' ಆಗಿತ್ತು. ಸಿನಿಮಾ ರಂಗಕ್ಕೆ ಬಂದಾಗ ರಾಜ್ಕುಮಾರ್ ಎಂದು ಬದಲಾಯಿತು. ಆದಾದ ಬಳಿಕ ಕನ್ನಡದ ಕಣ್ಮಣಿ, ವರನಟ ಹೀಗೆ ಹಲವು ಹೆಸರಗಳು ಬಿರುದಾಗಿ ಸೇರಿಕೊಂಡವು.
- ಅದೇ ರೀತಿ ಶಿವರಾಜ್ ಕುಮಾರ್ ಅವರ ಹೆಸರು ಪುಟ್ಟಸ್ವಾಮಿ ಎಂದಿತ್ತು. ಅವರ ಮೂಲ ಹೆಸರು ಶಿವ ಪುಟ್ಟಸ್ವಾಮಿ ಆಗಿತ್ತು. ಚಿತ್ರರಂಗಕ್ಕೆ ಬಂದಾಗ ಶಿವರಾಜ್ ಕುಮಾರ್ ಆಯಿತು.
- ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಪುನೀತ್ ರಾಜ್ಕುಮಾರ್, ಆಗ ಮಾ.ಲೋಹಿತ್ ಎಂದೇ ಚಿರಪರಿತರಾಗಿದ್ದರು. ಅಪ್ಪು ಸಿನಿಮಾ ಮೂಲಕ ನಾಯಕನಟನಾದ ನಂತರ ಪುನೀತ್ ರಾಜ್ಕುಮಾರ್ ಆಗಿ ಹೆಸರು ಬದಲಿಸಿಕೊಂಡರು. ಈ ಹೆಸರನ್ನು ಸೂಚಿಸಿದ್ದು ಅವರ ತಾಯಿ ಪಾರ್ವತಮ್ಮ ರಾಜ್ಕುಮಾರ್. ಪುನೀತ್ ಆಗಿ ಹೆಸರು ಬದಲಾದ ನಂತರ ಅವರು ಸಿನಿಮಾ ರಂಗದಲ್ಲಿ ತಿರುಗಿ ನೋಡಲೇ ಇಲ್ಲ. ಬಹಳ ಉತ್ತುಂಗಕ್ಕೆ ಏರಿದರು. ಅಪ್ಪು, ಪವರ್ ಸ್ಟಾರ್, ರಾಜಕುಮಾರ ಎಂಬ ಬಿರುದಿನ ಹೆಸರುಗಳು ಸೇರಿಕೊಂಡವು.
ಡಾ. ರಾಜ್ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಮಗ ಗುರುರಾಜ್ ಕುಮಾರ್ ಅವರು ಯುವರಾಜ್ ಆಗಿ ಹೆಸರು ಬದಲಿಸಿಕೊಂಡಿದ್ದಾರೆ. ಒಟ್ಟಾರೆ, ರಾಜ್ ಕುಟುಂಬಕ್ಕೂ ಹೆಸರು ಬದಲಾವಣೆಗೂ ಅವಿನಾಭಾವ ನಂಟಿದೆ.