ಬೆಂಗಳೂರು: ಸಾಹಿತಿ ಎಸ್.ಎಲ್ ಭೈರಪ್ಪ ದ್ರೌಪತಿ ಬಗ್ಗೆ ಲಘುವಾಗಿ ಮಾತನಾಡಿದ ವಿಷಯದ ಕುರಿತು ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡುವ ಕುರಿತು ಕಾಂಗ್ರೆಸ್ ಸದಸ್ಯ ರಮೇಶ್ ಹಾಗು ಸಭಾಪತಿ ಬಸವರಾಜ ಹೊರಟ್ಟಿ ನಡುವೆ ಕೆಲಕಾಲ ಜಟಾಪಟಿ ನಡೆಯಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಶೂನ್ಯ ವೇಳೆಯನ್ನು ಕೈಗೆತ್ತಿಕೊಳ್ಳಲಾಯಿತು. ಮೂರು ಪ್ರಶ್ನೆಗಳಲ್ಲಿ ಎರಡಕ್ಕೆ ಅವಕಾಶ ಕಲ್ಪಿಸಿದ ಸಭಾಪತಿ ಬಸವರಾಜ ಹೊರಟ್ಟಿ ರಮೇಶ್ ಪ್ರಸ್ತಾವನೆಗೆ ಅನುಮತಿ ನೀಡಲು ನಿರಾಕರಿಸಿದರು. ನಿಮ್ಮ ಪ್ರಶ್ನೆ ನೋಡಿದ್ದೇನೆ, ಎಲ್ಲವನ್ನೂ ಓದಿದ್ದೇನೆ, ನಿಮ್ಮ ಜೊತೆ ಚರ್ಚೆ ನಡೆಸಿ ನಂತರ ಅವಕಾಶ ನೀಡುತ್ತೇನೆ. ಇದು ಸೂಕ್ಷ್ಮವಾದ ವಿಷಯ, ಒಂದು ಸಮುದಾಯಕ್ಕೆ ಸೇರಿದ ವಿಷಯ ಹಾಗಾಗಿ ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ಕೊಡಲಾಗುತ್ತದೆ, ಮೊದಲು ನನ್ನೊಂದಿಗೆ ಚರ್ಚಿಸಿ ಎಂದರು.
ಆದರೆ ಇದಕ್ಕೆ ಸದಸ್ಯ ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು. ಯಾವ ಕಾರಣಕ್ಕೆ ಪ್ರಸ್ತಾವನೆಗೆ ಅವಕಾಶ ನೀಡುತ್ತಿಲ್ಲ ಎನ್ನುವುದನ್ನು ಹೇಳಬೇಕು ಎಂದು ಪಟ್ಟಿ ಹಿಡಿದರು. ರಮೇಶ್ಗೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಹಾಗು ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸಾಥ್ ನೀಡಿದರು. ಅನುಮತಿ ನಿರಾಕರಿಸಿದಲ್ಲಿ ಸದಸ್ಯರಿಗೆ ಕಾರಣ ತಿಳಿಸಬೇಕು ಎಂದರು.
ನಂತರ ಏರು ದನಿಯಲ್ಲಿ ಕೂಗಾಡಿದ ಸದಸ್ಯ ರಮೇಶ್ ಪ್ರಸ್ತಾವನೆ ಮಂಡಿಸಲು ಅವಕಾಶ ಕೋರಿದರು, ಶೂನ್ಯ ವೇಳೆಯಲ್ಲಿ ಅವಕಾಶ ನೀಡಲು, ಪ್ರಸ್ತಾವನೆ ಕೊಟ್ಟಿದ್ದೇನೆ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಇದಕ್ಕೆ ಕೆರಳಿದ ಸಭಾಪತಿಗಳು ಕೊಟ್ಟಿದ್ದೆಲ್ಲಾ ತೆಗೆದುಕೊಳ್ಳಬೇಕೆಂದಿಲ್ಲ, ಪ್ರಸ್ತಾವನೆಯನ್ನು ಪರಿಶೀಲಿಸಿ ತೆಗೆದುಕೊಳ್ಳಲಾಗುತ್ತದೆ. ಪ್ರತಿಪಕ್ಷ ನಾಯಕರ ಜೊತೆ ಚರ್ಚಿಸಿ ಮಧ್ಯಾಹ್ನ ಇದಕ್ಕೆ ಉತ್ತರ ನೀಡಲಾಗುತ್ತದೆ ಎಂದು ಬೇರೆ ಕಲಾಪವನ್ನು ಕೈಗೆತ್ತಿಕೊಂಡರು.
ಸ್ವಲ್ಪ ಸಮಯದ ನಂತರ ನಿಯಮಾವಳಿ ಪರಿಶೀಲಿಸಿ ವರದಿ ಪಡೆದುಕೊಂಡ ಸಭಾಪತಿ ಬಸವರಾಜ ಹೊರಟ್ಟಿ, ಶೂನ್ಯವೇಳೆಯಲ್ಲಿ ತಡೆಹಿಡಿದಿದ್ದ ರಮೇಶ್ ಅವರ ಪ್ರಸ್ತಾವನೆ ಮಂಡನೆಗೆ ಅನುಮತಿ ನೀಡಿದರು.
ಇದನ್ನೂ ಓದಿ.. 'ಬಂಗಾಳ ಟೈಗರ್'ಗೆ ಬೆಂಬಲ.. ಪ. ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಶಿವಸೇನೆ!
ಈ ವೇಳೆ ಪ್ರಸ್ತಾವನೆ ಮಂಡಿಸಿದ ರಮೇಶ್, ಎಸ್.ಎಲ್ ಭೈರಪ್ಪ ಅವರು ಮೈಸೂರಿನ ಸಮಾರಂಭದಲ್ಲಿ ದ್ರೌಪದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ದ್ರೌಪದಿ ಬೆಂಗಳೂರು ಜನರ ದೈವವಾಗಿದೆ. ಜನತೆಯ ಭಾವನೆಗೆ ಧಕ್ಕೆ ಉಂಟಾಗಿದೆ, ಆಕರ್ಷಕ ಹೆಣ್ಣು, ಆಕೆಯ ಮೇಲೆ ಹತ್ತಾರು ಜನರ ಕಣ್ಣಿತ್ತು ಎನ್ನುವುದು ಸೇರಿದಂತೆ ಕೀಳಾಗಿ ಉಲ್ಲೇಖಿಸಿದ್ದಾರೆ. ಅಸಂಬದ್ಧ, ವಿಕೃತ ಹೇಳಿಕೆಯಿಂದ ಮಹಾಭಾರತ, ರಾಮಾಯಣದ ಬಗ್ಗೆ ಅಭಿಪ್ರಾಯ ಬದಲಾಗಲಿದೆ. ಭೈರಪ್ಪ ವಿರುದ್ಧ ಪ್ರತಿಭಟನೆ ನಡೆದಿವೆ, ಪೊಲೀಸ್ ದೂರು ಕೂಡ ದಾಖಲಾಗಿದೆ. ಹಾಗಾಗಿ ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದರು.