ಬೆಂಗಳೂರು ಗ್ರಾಮಾಂತರ: ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣನ ಜಮೀನಿನಲ್ಲಿ ಬೆಳೆದಿದ್ದ ಟೊಮೊಟೊ ಬೆಳೆಯನ್ನು ತಮ್ಮ ನಾಶಪಡಿಸಿದ ಘಟನೆ ಜಡಿಗೇನಹಳ್ಳಿ ಹೋಬಳಿಯ ಗೊಣಕನಹಳ್ಳಿಯಲ್ಲಿ ನಡೆದಿದೆ.
ಹಸನ್ ಸಾಬ್ ಎಂಬುವವರು ತಮ್ಮ 36 ಗುಂಟೆ ಜಮೀನಿನಲ್ಲಿ ಟೊಮೊಟೊ ಬೆಳೆದಿದ್ದರು. ಅವರ ಸಹೋದರ ಮೆಹಬೂಬ್ ಆಸ್ತಿಯಲ್ಲಿ ಪಾಲು ಬರಬೇಕು ಎಂದು ಕ್ಯಾತೆ ತೆಗೆದಿದ್ದ. ಅಲ್ಲದೆ ಯುವಕರನ್ನು ಕರೆತಂದು ಬೆಳೆ ನಾಶಪಡಿಸಿದ್ದಾನೆ ಎನ್ನಲಾಗಿದೆ.
ಘಟನೆ ಕುರಿತು ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಪೊಲೀಸರು ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮನಿಗೆ ಸಿಗಬೇಕಾದ 12 ಗುಂಟೆ ಜಮೀನು ನೀಡಲಾಗಿದೆ. 36 ಗುಂಟೆ ನಾನು ಖರೀದಿ ಮಾಡಿದ್ದು, ಈ ಜಾಗಕ್ಕೂ ನನ್ನ ತಮ್ಮನಿಗೂ ಸಂಬಂಧವಿಲ್ಲ. ಆದರೂ ಕಿರಿಕಿರಿ ಮಾಡುತ್ತಿದ್ದು ಇಂದು ಬೆಳೆ ನಾಶ ಮಾಡಿದ್ದಾನೆ. ಪಾಲು ಬರಬೇಕಿದ್ದರೆ ಕಾನೂನು ಹೋರಾಟ ಮಾಡಬೇಕು. ಬೆಳೆ ನಾಶಮಾಡಿ ಸಂಕಷ್ಟಕ್ಕೆ ಸಿಲುಕಿಸುವುದು ಸೂಕ್ತವಲ್ಲ ಎಂದು ರೈತ ಹಸನ್ ಸಾಬ್ ನೋವು ತೋಡಿಕೊಂಡಿದ್ದಾರೆ.