ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ ಕೆಂಗೇರಿ ಶಾಖೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗೋಕುಲಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸುಬ್ರಹ್ಮಣ್ಯ ರೆಡ್ಡಿಗೆ ಸೇರಿದ 4.83 ಕೋಟಿ ರೂ. ಮೌಲ್ಯದ 5 ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
ಆರೋಪಿ ಎಸ್.ಕೆ.ಸುಬ್ರಹ್ಮಣ್ಯ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಆಸ್ತಿ ಪತ್ರ ಅಡವಿಟ್ಟು ಸಾಲ ಪಡೆದು ವಂಚಿಸಿದ್ದು, ಪ್ರಕರಣದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಕೈವಾಡವಿದ್ದ ಪರಿಣಾಮ ಇಬ್ಬರು ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಪ್ರವೀಣ್ ಕುಮಾರ್ ತನ್ನ ಅಧಿಕಾರವಧಿಯಲ್ಲಿ 186 ಖಾತೆಗಳಿಗೆ ಸಾಲ ಮಂಜೂರು ಮಾಡಿದ್ದರು. ಈ ಪೈಕಿ 57 ಸಾಲಗಳು ಸುಬ್ರಮಣ್ಯ ರೆಡ್ಡಿಗೆ ಸೇರಿದ್ದು, ಒಟ್ಟು 12 ಕೋಟಿ ಸಾಲ ಪಡೆದು ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಈ ಸಂಬಂಧ ಉಪಪ್ರಬಂಧಕ ಲಲಿತ್ ತ್ಯಾಗಿ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ನೀಡಿದ್ದು, ಈ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ಆರೋಪಿ ಎಸ್.ಕೆ.ಸುಬ್ರಹ್ಮಣ್ಯ ಬ್ಯಾಂಕ್ ಆಫ್ ಬರೋಡಾದಲ್ಲಿ ಚಿನ್ನದ ಮೇಲೆ ಸಾಲ ಪಡೆದು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸಾಲ ತೀರಿಸಿರುವುದು ಗೊತ್ತಾಗಿದೆ. ಅಲ್ಲದೇ, ಇನ್ನೊಂದು ಆಸ್ತಿಯನ್ನು ಖರೀದಿ ಮಾಡಿದ್ದಾನೆ. ಈ ಎಲ್ಲ ಮಾಹಿತಿ ಪಡೆದ ಇಡಿ ಆರೋಪಿಯ ಆಸ್ತಿ ಜಪ್ತಿ ಮಾಡಿದೆ.