ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಲಾಕ್‌ಡೌನ್ ಹೇರಿದೆ. ಆರ್ಥಿಕವಾಗಿ ದೊಡ್ಡ ವಿಪತ್ತು ಸೃಷ್ಟಿಸುವ ಈ ಲಾಕ್‌ಡೌನ್ ರಾಜ್ಯದ ಬೊಕ್ಕಸವನ್ನು ಹೀರಿ ಬಿಟ್ಟಿದೆ. ಈವರೆಗೆ ರಾಜ್ಯದ ಬೊಕ್ಕಸಕ್ಕಾಗಿರುವ ನಷ್ಟದ ವಿವರ ಇಲ್ಲಿದೆ ನೋಡಿ.
ಕೋವಿಡ್ ಎರಡನೇ ಅಲೆ ರಾಜ್ಯವ್ಯಾಪಿ ವೇಗವಾಗಿ ಹರಡುತ್ತಿದೆ. ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಲಾಕ್‌ಡೌನ್ ಹೇರಿದೆ. ಅಗತ್ಯ ಸೇವೆಗಳಿಗೆ ನಿರ್ಬಂಧಿತ ಹಾಗೂ ನಿಯಮಿತ ಅನುಮತಿ ನೀಡುವ ಮೂಲಕ ಏಪ್ರಿಲ್ 27ರಿಂದ ಮೇ 24ರ ವರೆಗೆ ಲಾಕ್‌ಡೌನ್ ಹೇರಿದೆ. ಮೇ ತಿಂಗಳಾಂತ್ಯದ ವರೆಗೆ ಲಾಕ್‌ಡೌನ್ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.
ಲಾಕ್‌ಡೌನ್ ರಾಜ್ಯದಲ್ಲಿ ಕೊರೊನಾ ಮಟ್ಟ ಹಾಕುವಲ್ಲಿ ನಿರೀಕ್ಷಿಸಿದಷ್ಟರ ಮಟ್ಟಿಗೆ ಅಲ್ಲವಾದರೂ ಸ್ವಲ್ಪ ಮಟ್ಟಿಗೆ ಅಲ್ಪವಿರಾಮ ಹಾಕಿದೆ. ಆದರೆ, ಲಾಕ್‌ಡೌನ್ ಆರ್ಥಿಕತೆಯನ್ನು ಮಾತ್ರ ಸರ್ವನಾಶಕ್ಕೆ ಕೊಂಡೊಯ್ದಿದೆ. ಲಾಕ್ಡೌನ್ನಿಂದ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತವಾಗಿರುವುದರಿಂದ ರಾಜ್ಯದ ಬೊಕ್ಕಸ ಸೇರುವ ಹಣದಲ್ಲಿ ಭಾರಿ ನಷ್ಟ ಉಂಟಾಗುತ್ತಿದೆ. ರಾಜ್ಯದ ಬೊಕ್ಕಸ ಸೇರಬೇಕಾದ ತೆರಿಗೆ ಹಣ ಕಳೆದ ಒಂದು ತಿಂಗಳಿಂದ ಬರಿದಾಗುತ್ತಿದೆ.
ರಾಜ್ಯದ ತೆರಿಗೆ ಸಂಗ್ರಹದಲ್ಲಾಗಿರುವ ನಷ್ಟ ಏನು ?: ರಾಜ್ಯ ಸರ್ಕಾರ ಈ ಬಾರಿ ಸ್ವಂತ ತೆರಿಗೆ ಮೂಗಳಿಂದ ಸುಮಾರು 1,24,201.98 ಕೋಟಿ ರೂ. ಸಂಗ್ರಹಿಸುವ ಅಂದಾಜು ಮಾಡಿದೆ. ಆದರೆ, ಆರ್ಥಿಕ ವರ್ಷದ ಆರಂಭದಲ್ಲೇ ಈ ಲೆಕ್ಕಾಚಾರವನ್ನು ಕೊರೊನಾ ಎರಡನೇ ಅಲೆ ಬುಡಮೇಲಾಗಿಸಿದೆ. ಏಪ್ರಿಲ್ ತಿಂಗಳಲ್ಲಿ ನಿರ್ಬಂಧ ಇದ್ದರೆ, ಏಪ್ರಿಲ್ 27ರ ಬಳಿಕ ರಾಜ್ಯಾದ್ಯಂತ ಲಾಕ್‌ಡೌನ್ ಹೇರಿಕೆಯಾಗಿದೆ. ಹೀಗಾಗಿ ರಾಜ್ಯದ ಸ್ವಂತ ತೆರಿಗೆ ಮೂಲಗಳು ಭಾಗಶಃ ಬರಿದಾಗಿವೆ.
ಪ್ರಮುಖ ಆದಾಯ ತರುವ ತೆರಿಗೆಗಳಾದ ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ, ಮೋಟಾರು ವಾಹನ ತೆರಿಗೆ ಲಾಕ್‌ಡೌನ್ ನಿಂದ ಬತ್ತಿ ಹೋಗಿವೆ. ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಸ್ವಂತ ತೆರಿಗೆಗಳಿಂದ ಬರಬೇಕಾದ ಆದಾಯದಲ್ಲಿ ಅಂದಾಜು 5,000 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ತೆರಿಗೆ ನಷ್ಟ: ರಾಜ್ಯದ ಬೊಕ್ಕಸ ತುಂಬಿಸುವಲ್ಲಿ ವಾಣಿಜ್ಯ ತೆರಿಗೆ ದೊಡ್ಡ ಪಾತ್ರ ವಹಿಸುತ್ತದೆ. ಸ್ವಂತ ತೆರಿಗೆ ಮೂಲದಲ್ಲಿ ಸುಮಾರು ಶೇ 62ರಷ್ಟು ಕೊಡುಗೆ ವಾಣಿಜ್ಯ ತೆರಿಗೆಯದ್ದೇ. 2021-22 ಸಾಲಿನಲ್ಲಿ ಅಂದಾಜು 76,473 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಅದರಂತೆ ತಿಂಗಳಿಗೆ ಸುಮಾರು 6,300 ಕೋಟಿ ರೂ. ಸಂಗ್ರಹವಾಗಬೇಕಿದೆ. ಆದರೆ, ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತವಾಗಿರುವುದರಿಂದ ಕಳೆದ ಏಪ್ರಿಲ್ 27ರಿಂದ ಇಲ್ಲಿವರೆಗೆ ಸುಮಾರು 3,500 ಕೋಟಿ ರೂ.ವಾಣಿಜ್ಯ ತೆರಿಗೆ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರದ ಜಿಎಸ್ ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ.ಮನೋಹರ್ ತಿಳಿಸಿದ್ದಾರೆ.
ಇತ್ತ ವಾಣಿಜ್ಯ ತೆರಿಗೆ ವ್ಯಾಪ್ತಿಗೆ ಬರುವ ತೈಲ ಮಾರಾಟ ತೆರಿಗೆ ಮೂಲಕ ರಾಜ್ಯದ ಬೊಕ್ಕಸಕ್ಕೆ ಮಾಸಿಕ 1,250 ಕೋಟಿ ರೂ. ಸಂಗ್ರಹವಾಗುತ್ತದೆ. ಆದರೆ ಈ ಲಾಕ್‌ಡೌನ್ ನಿಂದ ಸುಮಾರು 200-300 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಮೋಟರ್ ವಾಹನ ತೆರಿಗೆ ನಷ್ಟ: ರಾಜ್ಯ ತೆರಿಗೆಯ ಮತ್ತೊಂದು ಪ್ರಮುಖ ಆದಾಯ ಮೂಲವಾದ ಮೋಟಾರು ವಾಹನ ತೆರಿಗೆ ಸಂಗ್ರಹವೂ ಭಾಗಶಃ ಬರಿದಾಗಿದೆ. 2021-22 ಸಾಲಿನಲ್ಲಿ 7,515 ಕೋಟಿ ರೂ. ತೆರಿಗೆ ಸಂಗ್ರಹದ ಅಂದಾಜು ಮಾಡಲಾಗಿದೆ. ಅದರಂತೆ ತಿಂಗಳಿಗೆ 582 ಕೋಟಿ ರೂ. ತೆರಿಗೆ ಸಂಗ್ರಹವಾಗಬೇಕಿದೆ. ಆದರೆ, ಲಾಕ್‌ಡೌನ್ ನಿಂದ ಬಹುತೇಕ ಆದಾಯ ಬರಿದಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಅವರು ನೀಡಿರುವ ಅಂಕಿ - ಅಂಶದಂತೆ ಈಗಾಗಲೇ ಏಪ್ರಿಲ್ ನಲ್ಲಿ ನೀಡಬೇಕಾಗಿರುವ ವಾಹನ ತೆರಿಗೆಯನ್ನು ಮೇ 31 ವರೆಗೆ ಮುಂದೂಡಿರುವುದರಿಂದ ಯಾವುದೇ ವಾಹನ ತೆರಿಗೆ ಸಂಗ್ರಹವಾಗಿಲ್ಲ. ಏಪ್ರಿಲ್ ತಿಂಗಳಲ್ಲಿ 582 ಕೋಟಿ ವಾಹನ ತೆರಿಗೆ ಸಂಗ್ರಹವಾಗಬೇಕಿತ್ತು. ಆದರೆ, 510 ಕೋಟಿ ಸಂಗ್ರಹವಾಗಿದೆ. ಸುಮಾರು 70 ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ. ಬೆರಳೆಣಿಕೆಯಷ್ಟು ಆನ್ ಲೈನ್ ನೋಂದಾಣಿ ಬಿಟ್ಟರೆ ಯಾವುದೇ ವಾಹನ ನೋಂದಾಣಿ ಪ್ರಕ್ರಿಯೆ ನಡೆಯುತ್ತಿಲ್ಲ. ಹೀಗಾಗಿ ಮೇ ತಿಂಗಳಲ್ಲಿ ಬಹುತೇಕ 582 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ನೋಂದಣಿ ಮತ್ತು ಮುಂದ್ರಾಂಕ ಶುಲ್ಕ ನಷ್ಟ: ರಾಜ್ಯದ ಬೊಕ್ಕಸ ತುಂಬಿಸುವ ಮತ್ತೊಂದು ತೆರಿಗೆ ಮೂಲವಾದ ನೋಂದಣಿ ಮತ್ತು ಮುಂದ್ರಾಂಕ ಶುಲ್ಕದ ಸಂಗ್ರಹವೂ ಬಹುತೇಕ ಸ್ಥಗಿತವಾಗಿದೆ. 2021-22 ಸಾಲಿನಲ್ಲಿ 12,655 ಕೋಟಿ ರೂ. ನೋಂದಣಿ ಶುಲ್ಕ ಸಂಗ್ರಹದ ಅಂದಾಜು ಮಾಡಲಾಗಿದೆ. ಮಾಸಿಕವಾಗಿ 800-1,000 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಮಾಡಬೇಕಿದೆ. ಆದರೆ, ಲಾಕ್‌ಡೌನ್ ನಿಂದ ನೋಂದಣಿ ಮತ್ತು ಮುದ್ರಾಂಕ ಕಚೇರಿಗಳನ್ನು ಸ್ಥಗಿತಗೊಳಿಸಲಾಗಿದ್ದು, ಈವರೆಗೆ ಸುಮಾರು 700 ಕೋಟಿ ರೂ. ಆದಾಯ ಖೋತವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಲಾಕ್‌ಡೌನ್ ವೇಳೆ ಬಹುತೇಕ ಒಂದು ತಿಂಗಳ ಅವಧಿಗೆ ಸುಮಾರು 1000 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಖೋತಾವಾಗಿತ್ತು. ಈ ಬಾರಿಯೂ ಮೇ ಸಂಪೂರ್ಣ ಲಾಕ್‌ಡೌನ್ ಇರಲಿದ್ದು, 800- 1000 ಕೋಟಿ ರೂ. ನಷ್ಟ ಅನುಭವಿಸಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಬಕಾರಿ ತೆರಿಗೆಗೆ ಅಲ್ಪ ಖೋತಾ: ಇತ್ತ ರಾಜ್ಯದ ಪ್ರಮುಖ ಆದಾಯ ಮೂಲವಾದ ಅಬಕಾರಿ ತೆರಿಗೆಗೂ ಲಾಕ್‌ಡೌನ್ ಏಟು ನೀಡಿದೆ. 2021-22 ಸಾಲಲ್ಲಿ 24,580 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಅದರಂತೆ ಮಾಸಿಕ ಸುಮಾರು 2,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗಬೇಕು. ಆದರೆ, ಮದ್ಯ ಮಾರಾಟಕ್ಕೆ ಬೆಳಗ್ಗೆ 6-10 ಗಂಟೆ ವರೆಗಿನ ನಿರ್ಬಂಧಿತ ಸಮಯಾವಕಾಶ ನೀಡಿರುವ ಕಾರಣ ಮಾರಾಟದಲ್ಲಿ ಸ್ವಲ್ಪ ಕುಂಠಿತವಾಗಿದೆ.
ಅಬಕಾರಿ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ ಕಂಡಿಲ್ಲ. ಸಾಮಾನ್ಯವಾಗಿ ದಿನಕ್ಕೆ 65 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗುತ್ತದೆ. ಲಾಕ್‌ಡೌನ್ ಹಿನ್ನೆಲೆ ಅಬಕಾರಿ ತೆರಿಗೆ ಸಂಗ್ರಹ 50-55 ಕೋಟಿ ರೂ.ಗೆ ಇಳಿಕೆಯಾಗಿದೆ. ಸುಮಾರು ದಿನಕ್ಕೆ ಸುಮಾರು 10-15 ಕೋಟಿ ರೂ. ನಷ್ಟ ಅನುಭವಿಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.