ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಅದರಲ್ಲೂ ಆರಂಭಿಕ ದಿನಗಳಲ್ಲಿ ನಮಗೆ ಯಾವುದೇ ಸೂಕ್ತ ಅರಿವು ಇರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಅವರು ಮಾತನಾಡಿದರು.
ಕೋವಿಡ್ ಆರಂಭಿಕ ದಿನಗಳಲ್ಲಿ ಯಾವುದೇ ರೀತಿಯಲ್ಲೂ ದೊಡ್ಡಮಟ್ಟದ ಸಮಸ್ಯೆ ಆಗದ ರೀತಿ ಸಮರ್ಥವಾಗಿ ಎದುರಿಸುವಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಯಶಸ್ವಿಯಾಗಿತ್ತು. ಒಬ್ಬ ಜನನಾಯಕರಾಗಿ ಅವರು ಕೈಗೊಂಡ ನಿರ್ಧಾರಗಳು ಇಂದು ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಹಂತಕ್ಕೆ ತಂದು ನಿಲ್ಲಿಸಿದೆ. ಇದೇ ರೀತಿ ಅಜೀಂ ಪ್ರೇಮ್‌ಜೀ ಸಹ ಅತ್ಯಂತ ಮೇರು ವ್ಯಕ್ತಿತ್ವದವರು. 21ನೇ ಶತಮಾನ ಜ್ಞಾನದ ಶತಮಾನ. ಅಜೀಂ ಪ್ರೇಮ್‌ಜೀ ವ್ಯಕ್ತಿತ್ವಕ್ಕೆ ಮೆರುಗು ತರುವ ಕಾರ್ಯ ಮಾಡಿದ್ದಾರೆ. ಅವರ ನಡೆನುಡಿಗಳು ಅತ್ಯಂತ ಮಾನವೀಯವಾಗಿರುತ್ತವೆ. ವಿದ್ಯೆ ಹಾಗೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ತುಂಬಾ ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದಾರೆ. ಹಾಜಬ್ಬ ಅವರ ಸಾಧನೆ ಸಹ ದೊಡ್ಡದು. ಇದೊಂದು ಅಚ್ಚುಕಟ್ಟಾದ ಕಾರ್ಯಕ್ರಮ ಎಂದು ಬಣ್ಣಿಸಿದರು.
ಮಾಧ್ಯಮ ಹಾಗೂ ರಾಜಕೀಯಕ್ಕೆ ಅವಿನಾಭಾವ ಸಂಬಂಧ ಇದೆ. ನಾವಿಲ್ಲದೆ ನೀವಿಲ್ಲ ಹಾಗೂ ನೀವಿಲ್ಲದೆ ನಾವಿಲ್ಲ. ನಮ್ಮ ನಡುವಿನ ಸಂಬಂಧ ಸಮಾಜ ಸುಧಾರಣೆಗೆ ಬಳಕೆಯಾಗಲಿ. ಬೆಂಗಳೂರು ಪ್ರೆಸ್ ಕ್ಲಬ್ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ಈಡೇರಿಸಲು ಬದ್ಧವಾಗಿದ್ದೇನೆ ಎಂದು ಸಿಎಂ ಭರವಸೆ ಇತ್ತರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಅತ್ಯಂತ ಪ್ರೀತಿಯಿಂದ 2021 ನೇ ಸಾಲಿನ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಅತ್ಯಂತ ಹೃದಯಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ. ನನ್ನ ಜೊತೆ ಇಂದು ಅಜೀಂ ಪ್ರೇಮ್‌ಜೀ ಸಹ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರು ದೇಶದ ಹೆಮ್ಮೆಯ ವ್ಯಕ್ತಿ. ಪ್ರಶಸ್ತಿ ಪಡೆದಿರುವ ಡಾ.ದೇವಿ ಶೆಟ್ಟಿ ಅವರು ಸಹ ಒಬ್ಬ ಕರ್ನಾಟಕದ ಆಸ್ತಿ. ಇನ್ನು ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಇತರ ಭಾಷೆಗಳಲ್ಲಿ ಉತ್ತಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಕರ್ನಾಟಕದ ಕೀರ್ತಿ ಬೆಳಗಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹ ಉತ್ತಮ ಸಾಧನೆ ಮಾಡಿದವರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಕ್ಷರ ಸಂತ ಹರೇಕಳ ಹಾಜಬ್ಬ ರಾಜ್ಯದ ದೊಡ್ಡ ಆಸ್ತಿ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ದಿಟ್ಟತನದಿಂದ ಹೋರಾಡಿದ್ದಾರೆ. ಈ ವೇಳೆ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಸಹಾಯ ಮಾಡುವ ಕಾರ್ಯವನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನೆ. ಅದು ಈಗಲೂ ಮುಂದುವರಿದಿದೆ. ಕನ್ನಡದ ನೆಲ-ಜಲ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದು. ಪತ್ರಕರ್ತರು ಇದನ್ನ ಯಾವತ್ತೂ ಮರೆಯಬಾರದು. ಸರ್ಕಾರವು ಸಾಮಾನ್ಯರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಕಾರ್ಯವನ್ನು ಪತ್ರಿಕೋದ್ಯಮ ಮಾಡುತ್ತಿದೆ ಎಂದು ತಿಳಿಸಿದರು.
ನಟ ಕಿಚ್ಚ ಸುದೀಪ್, ವಿಧಾನ ಪರಿಷತ್ ಪ್ರತಿಪಕ್ಷ ಉಪನಾಯಕ ಗೋವಿಂದರಾಜ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ವಿಶೇಷ ಗೌರವದ ಮೂಲಕ ಅಭಿನಂದಿಸಲಾಯಿತು.
ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ನಾರಾಯಣ ಹೆಲ್ತ್ ಸಿಟಿ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು.
ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಒಟ್ಟು 30 ಮಂದಿ ಪತ್ರಕರ್ತರಿಗೆ ಎರಡು ಸಾಲಿನ ಅತ್ಯುತ್ತಮ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೈಪಿಡಿ ಬಿಡುಗಡೆ ಮಾಡಲಾಯಿತು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಯೂಟ್ಯೂಬ್ ಚಾನಲ್ಗೂ ಚಾಲನೆ ನೀಡಲಾಯಿತು.
ಸಚಿವ ಮುನಿರತ್ನ, ಸಚಿವ ಮುರುಗೇಶ್ ನಿರಾಣಿ, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.