ಬೆಂಗಳೂರು : ಕರಕುಶಲ ಕ್ಷೇತ್ರದಲ್ಲಿ ಶ್ರಮಪಟ್ಟು ರಾಷ್ಟ್ರಪತಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಪಡೆದುಕೊಂಡಿದ್ದ ಪದಕಗಳನ್ನೇ ಕಳ್ಳರು ದೋಚಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಷ್ಟ್ರ ಪ್ರಶಸ್ತಿ ವಿಜೇತೆ ಹೇಮಾಶೇಖರ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಕರಕುಶಲ, ಬಾಟಿಕ್ ಟೈ ಅಂಡ್ ಡೈ ಕಲೆಯಲ್ಲಿ ಕಳೆದ 35 ವರ್ಷಗಳಿಂದ ಹೇಮಾಶೇಖರ್ ಅವರು ಗುರುತಿಸಿಕೊಂಡಿದ್ದಾರೆ. 2002ರಲ್ಲಿ ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಹಾಗೂ 2014ರಲ್ಲಿ ಪ್ರಣಬ್ ಮುಖರ್ಜಿ ಅವರಿಂದ ಶಿಲ್ಪಗುರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಇದು ಕರಕುಶಲಕರ್ಮಿಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ.
ಏನಿದು ಪ್ರಕರಣ?: ಹೇಮಾಶೇಖರ್ ಹಾಗೂ ಚಂದ್ರಶೇಖರ್ ದಂಪತಿ ಕೋಣನಕುಂಟೆ ಠಾಣಾ ವ್ಯಾಪ್ತಿಯ ಸುಪ್ರಜಾನಗರದಲ್ಲಿ ವಾಸವಾಗಿದ್ದಾರೆ. ಇದೇ ತಿಂಗಳು 5ರಂದು ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ತೆರಳಿದ್ದರು. ಮಾರ್ಚ್ 15ರಂದು ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಏನೆಲ್ಲಾ ಕಳ್ಳತನವಾಗಿದೆ?: ಮನೆಯಲ್ಲಿದ್ದ 22 ಗ್ರಾಂನ ಚಿನ್ನದ ಪದಕ, ಸುಮಾರು 200 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ ವಸ್ತು ಹಾಗೂ 85 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಹೋಳಿ ಆಡುವ ನೆಪದಲ್ಲಿ ಹಣ ವಸೂಲಿ?
ಬಾಟಿಕ್ ಟೈ ಅಂಡ್ ಡೈ ಕಲೆಯಲ್ಲಿ ಪದಕ ಪಡೆದ ಮೊದಲಿಗರು ಹೇಮಾಶೇಖರ್. 1995ರ ರಾಜ್ಯ ಪ್ರಶಸ್ತಿ, 1994ರ ರಾಜ್ಯ ಮೆರಿಟ್ ಸರ್ಟಿಫಿಕೆಟ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವೆಲ್ಲವನ್ನು ಗಮನಿಸಿರುವ ಆರೋಪಿಗಳು, ಇವರ ಪಕ್ಕದ ಮನೆಯ ಟೆರೆಸ್ ಮೂಲಕ ಹತ್ತಿ ಟವೆಲ್ ಸುತ್ತಿಕೊಂಡು ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದಾರೆ.