ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಆಡಳಿತ, ಪ್ರತಿಪಕ್ಷಗಳ ನಾಯಕರು ವಿಧಾನಸೌಧದಲ್ಲಿ ಮತದಾನ ಮಾಡುತ್ತಿದ್ದಾರೆ.
ತಮ್ಮ ಹಕ್ಕು ಚಲಾವಣೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಚುನಾವಣೆಯಲ್ಲಿ ಗೆಲ್ಲುವುದು ಖಚಿತ. ದಕ್ಷ ಆಡಳಿತಗಾರರಾಗಿ, ಜನಪ್ರತಿನಿಧಿಯಾಗಿ, ಸಚಿವರಾಗಿ, ರಾಜ್ಯಪಾಲರಾಗಿ ಉತ್ತಮ ಆಡಳಿತ ನೀಡಿದ್ದರು. ರಾಷ್ಟ್ರಪತಿ ಸ್ಥಾನಕ್ಕೂ ಗೌರವ ತರುವ ವ್ಯಕ್ತಿಯಾಗಿದ್ದಾರೆ. 2/3 ಮತ ಪಡೆದು ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ವಿಚಾರವಾಗಿ ಮಾತನಾಡಿ, ಹಾಲು, ಮೊಸರನ್ನು ಪ್ಯಾಕ್ ಮಾಡದೇ ಮಾರಾಟ ಮಾಡುವವರಿಗೆ ಜಿಎಸ್ಟಿ ಅನ್ವಯಿಸದು. ಬ್ರಾಂಡ್ ಮಾಡಿ ಮಾರಾಟ ಮಾಡುವವರಿಗೆ 5 ಪ್ರತಿಶತ ಜಿಎಸ್ಟಿ ಹಾಕಲಾಗಿದೆ. ಅದನ್ನು ಕ್ಲೇಮ್ ಮಾಡಲೂ ಅವಕಾಶವಿದೆ. ಜಿಎಸ್ಟಿ ಹಾಕದಿದ್ದರೆ ಜನರ ಮೇಲೆ ತೆರಿಗೆ ಬೀಳುತ್ತಿತ್ತು ಎಂದರು.
ಹಾಲಿನ ದರವನ್ನು ಹೆಚ್ಚಳ ಮಾಡಿದ್ದಾರೆ. ಇದರ ಅವಶ್ಯಕತೆಯಿರಲಿಲ್ಲ. 5% ಟ್ಯಾಕ್ಸ್ ಮರುಪಾವತಿ ಮಾಡಿಕೊಳ್ಳುವ ಅವಕಾಶವಿದೆ. ಹೀಗಾಗಿ ದರ ಏರಿಕೆ ಬೇಡವಾಗಿತ್ತು. ಈ ಬಗ್ಗೆ ಜಿಎಸ್ಟಿ ಕೌನ್ಸಿಲ್ ಮೂಲಕ ನಿರ್ದೇಶನ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಷ್ಟ್ರಪತಿ ಚುನಾವಣೆ ಸರ್ವಾನುಮತದಿಂದ ಆಗಬೇಕಿತ್ತು. ದ್ರೌಪದಿ ಮುರ್ಮು ಅವರು ಶೇ.70 ರಷ್ಟು ಮತ ಪಡೆದು ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದು ಸಾಮಾನ್ಯ. ನಮ್ಮ ಎನ್‌ಡಿಎ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು.
ಓದಿ: ರಾಷ್ಟ್ರಪತಿ ಚುನಾವಣೆ: ಮತ ಚಲಾಯಿಸಿದ ಪ್ರಧಾನಿ, ವೀಲ್‌ಚೇರ್‌ನಲ್ಲಿ ಬಂದು ವೋಟ್ ಹಾಕಿದ ಮಾಜಿ ಪ್ರಧಾನಿ