ಬೆಂಗಳೂರು: ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ವಿಧಾನಪರಿಷತ್ನಲ್ಲಿ ಇಂದು ಮಂಡನೆಯಾಯಿತು. ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ಸಚಿವ ಪ್ರಭು ಚವ್ಹಾಣ್ ವಿಧೇಯಕ ಮಂಡಿಸಿ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಸದಸ್ಯರ ಗಲಾಟೆ ಶಮನಗೊಳಿಸಲು ಸಭಾಪತಿ ಪ್ರಯತ್ನ ಮಾಡಿದರೂ ಕೇಳದೇ, ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ಮಾಡಿದರು.
ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಇಂದೇ ಈ ವಿಷಯ ಚರ್ಚೆಗೆ ತೆಗೆದುಕೊಳ್ಳಬೇಕೆಂದು ನಿರ್ಧಾರವಾಗಿದ್ದರಿಂದ ಚರ್ಚೆ ಕೈಗೆತ್ತಿಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರತಿಪಕ್ಷದ ಸಿ.ಎಂ. ಇಬ್ರಾಹಿಂ, ಮರಿತಿಬ್ಬೇಗೌಡ, ಬಿ.ಕೆ. ಹರಿಪ್ರಸಾದ್ ಮತ್ತಿತರರು ವಿಧೇಯಕ ಮಂಡನೆಯನ್ನು ಖಂಡಿಸಿದರು. ನಾಳೆ ಮಧ್ಯಾಹ್ನದ ನಂತರ ಚರ್ಚೆಗೆ ತೆಗೆದುಕೊಂಡು, ಮುಕ್ತ ಚರ್ಚೆಗೆ ಅವಕಾಶ ನೀಡಿ. ರಾತ್ರಿಯಿಡೀ ಚರ್ಚೆ ನಡೆಸೋಣ ಎಂದರು. ಆದರೆ, ಬಿಲ್ ಕೈಗೆತ್ತಿಕೊಳ್ಳಲಾಗಿದೆ, ಸುದೀರ್ಘ ಚರ್ಚೆ ನಡೆಸಿ ಎಂದು ಸಭಾಪತಿ ಸಲಹೆ ನೀಡಿದರು. ಸಚಿವರು ಗದ್ದಲದ ನಡುವೆಯೇ ವಿವರಣೆ ನೀಡಿದ್ದರಿಂದ ಸೂಕ್ತ ಮಾಹಿತಿ ಸಿಗಲಿಲ್ಲ ಎಂದು ಕೆಲ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಗೃಹ ಸಚಿವರು ವಿವರಣೆ ನೀಡಿ, ಜಾನುವಾರುಗಳ ಸಂರಕ್ಷಣೆಯ ಉದ್ದೇಶದಿಂದ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೆ ತರುತ್ತಿದ್ದೇವೆ. 1964 ರಿಂದ ಕಾಯ್ದೆ ಜಾರಿಯಲ್ಲಿದೆ. ಆದರೆ ಪರಿಸ್ಥಿತಿ ಬದಲಾದ ಹಿನ್ನೆಲೆ ಇಂದಿನ ಸಂದರ್ಭಕ್ಕೆ ತಕ್ಕಂತೆ ಹಲವು ಸೆಕ್ಷನ್ ಬದಲಿಸಿ ಈ ಕಾನೂನು ತಂದಿದ್ದೇವೆ. ಪ್ರಾಣಿ ಹತ್ಯೆ ನಿಷೇಧ ಎಲ್ಲ ಧರ್ಮದಲ್ಲೂ ಇದೆ. ಬ್ರಿಟಿಷರು, ರಾಜರುಗಳ ಕಾಲದಲ್ಲಿ ಸಹ ಗೋ ಹತ್ಯೆ ನಿಷೇಧ ಜಾರಿಯಲ್ಲಿತ್ತು. ಗೋವು ಸೇರಿದಂತೆ ಹಲವು ಪ್ರಾಣಿಗಳು ಪೂಜಿಸಲ್ಪಡುತ್ತವೆ. ಮನುಷ್ಯನ ಜೀವನಕ್ಕೆ ಸದಾ ಬಳಕೆಯಾಗುವ ಜಾನುವಾರುಗಳು ನಮ್ಮ ಬದುಕಿನ ಭಾಗವಾಗಿವೆ. ಯಂತ್ರೋಪಕರಣಗಳು ಬರುವ ಮುನ್ನ ಇವೇ ಜೀವನಾಧಾರ ಆಗಿದ್ದವು. ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆ ಜಾನುವಾರು ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದೆ.
10 ರಿಂದ 17 ವರ್ಷ ಬದುಕುವ ಪ್ರಾಣಿಗಳನ್ನು ಈ ಕಾನೂನು ವ್ಯಾಪ್ತಿಗೆ ತಂದಿದ್ದೇವೆ. ಯಾವ ಪ್ರಾಣಿ, ಹೇಗೆ ಸಂರಕ್ಷಣೆ ಮಾಡಬೇಕು ಎಂಬ ವಿವರ ನೀಡಿದ್ದೇವೆ. ಒಟ್ಟು 14 ರಾಜ್ಯಗಳಲ್ಲಿ ಈ ಕಾನೂನು ಇದೆ. ಈ ಕಾನೂನು ರಕ್ಷಣೆಗೆ ಹಲವು ಯೋಜನೆ ಕೂಡ ರೂಪಿಸಲಾಗಿದೆ. ಕಾಯ್ದೆ ಜಾರಿಗೆ ಬಂದಾಗ ಯಾವ ಪರಿಣಾಮ ಸಾಕುವವರಿಗೆ ಆಗಬಹುದು ಎಂಬ ಮೂಲಭೂತ ಪ್ರಶ್ನೆ ಬಂದಿದೆ. ಇದಕ್ಕೆ ಸರ್ಕಾರ ಯೋಜನೆ ರೂಪಿಸಬೇಕಿದೆ. 184 ಗೋಶಾಲೆ ಸರ್ಕಾರದ್ದಿದೆ. 50 ಸಾವಿರ ಜಾನುವಾರು ರಕ್ಷಣೆ ಮಾಡುತ್ತಿದ್ದೇವೆ. ನಿತ್ಯ 17.50 ರೂ. ಪ್ರತಿ ಜಾನುವಾರಿಗೆ ಸರ್ಕಾರ ವ್ಯಯಿಸುತ್ತಿದೆ. ವಾರ್ಷಿಕ 2 ಲಕ್ಷ ಜಾನುವಾರು ಹತ್ಯೆ ಆಗುತ್ತದೆ ಎಂಬ ಮಾಹಿತಿ ಇದೆ. 50 ಸಾವಿರ ಜಾನುವಾರು ಮಿತಿ ಇದ್ದು, 2 ಲಕ್ಷಕ್ಕೆ ಏರಿಸುವ ತೀರ್ಮಾನ ಕೈಗೊಂಡಿದ್ದೇವೆ. ಹುಲ್ಲುಗಾವಲು ನಿರ್ಮಾಣ ಹಾಗೂ ಬಜೆಟ್ ನಲ್ಲೆ ಹೆಚ್ಚುವರಿ ಹಣ ಒದಗಿಸಲು ಸಿದ್ಧವಿದ್ದೇವೆ. ಬೇರೆ ರಾಜ್ಯದಲ್ಲಿ ಆಗುತ್ತಿರುವ ಸಂರಕ್ಷಣೆಯ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ವಿವರಿಸಿದರು.
ಕಾನೂನು ಉಲ್ಲಂಘಿಸಿ ಅಪರಾಧ ಎಸಗುವವರಿಗೆ ಮೂರು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ, ದಂಡದ ಮಿತಿ ಹೆಚ್ಚಿಸಿದ್ದೇವೆ. ಸಾಗಾಣಿಕೆಯಲ್ಲಿ ಅಂತರ್ ರಾಜ್ಯ ನಿರ್ಬಂಧನೆ ವಿಧಿಸಿದ್ದೇವೆ. ಒಂದು ಜಾನುವಾರಿಗೆ 50 ಸಾವಿರ ರೂ. ದಂಡ ವಿಧಿಸುತ್ತೇವೆ. ಪುನರಾವರ್ತಿತ ತಪ್ಪಿಗೆ 1 ರಿಂದ 10 ಲಕ್ಷದವರೆಗೂ ದಂಡ ಬೀಳಲಿದೆ, ತಪಾಸಣೆ ಕಠಿಣವಾಗಲಿದೆ. ಪ್ರಕರಣದ ವಿಚಾರಣೆ, ಕಾನೂನು ಕ್ರಮ ತ್ವರಿತಗೊಳಿಸಲು ಕ್ರಮ ಕೈಗೊಂಡಿದ್ದೇವೆ, ವಿನಾಯಿತಿ ಕೂಡ ಇರಲಿದೆ.
ಕೃಷಿ ಚಟುವಟಿಕೆಗೆ, 15 ಕಿಮೀ ವ್ಯಾಪ್ತಿಯಲ್ಲಿ ಸಾಗಾಣಿಕೆಗೆ, ಎಪಿಎಂಸಿ ಇಲ್ಲವೇ ಬೇರೆಡೆ ಜಾನುವಾರು ಮೇಳ, ಮಾರಾಟಕ್ಕೆ ಒಯ್ಯಲು ಪರವಾನಗಿ ಪಡೆದು ಸಾಗಾಣಿಕೆಗೆ ಅವಕಾಶ ಇದೆ. ಸಂಪೂರ್ಣ ಹಾಗೂ ಅವಶ್ಯವಿರುವ ಕಾನೂನು ಇದಾಗಿದೆ. ಮಾಂಸಾಹಾರಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಮೃಗಾಲಯಗಳಿಗೆ 13 ವರ್ಷ ಮೇಲ್ಪಟ್ಟ ಜಾನುವಾರು ಸರಬರಾಜಿಗೆ ಕ್ರಮ ಕೈಗೊಳ್ಳುತ್ತೇವೆ. ಮೃಗಾಲಯಗಳು ಆತಂಕ ಪಡುವ ಅಗತ್ಯವಿಲ್ಲ ಎಂದರು. ವಿವರಣೆ ನೀಡಿದ ನಂತರ ವಿಧೇಯಕದ ಮೇಲೆ ಚರ್ಚೆ ಆರಂಭವಾಗಿದೆ.