ಬೆಂಗಳೂರು: ಹವಾಮಾನ ಇಲಾಖೆ ಪ್ರಕಾರ 23 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ತ್ವರಿತ ಗತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಮುಂಗಾರು ಪೂರ್ವ ಸಿದ್ಧತೆ ಸಂಬಂಧ ಜಿಲ್ಲಾಡಳಿತ ಜೊತೆ ವಿಡಿಯೋ ಸಂವಾದ ನಡೆಸಿ ಬಳಿಕ ಮಾತನಾಡಿದ ಅವರು, ಪ್ರಪ್ರಥಮವಾಗಿ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಗುರುತಿಸಿ, ಪ್ರವಾಹ ನಿರ್ವಹಣೆ ಕಾರ್ಯವನ್ನು ಮಾಡುವಂತೆ ಸೂಚಿಸಲಾಗಿದೆ.
ಅಣೆಕಟ್ಟು ನಿರ್ವಹಣೆ ಹಾಗೂ ಮಾಹಿತಿ ವಿನಿಮಯಕ್ಕೆ ಅಂತರಾಜ್ಯ ಸಮನ್ವಯತೆ ಸಾಧಿಸಲಾಗಿದೆ. ವಿಪತ್ತು ನಿರ್ವಹಣೆಯ ವಿವಿಧ ಹಂತಗಳಲ್ಲಿ ವಿವಿಧ ಇಲಾಖೆಗಳ ಪಾತ್ರ ಹಾಗೂ ಜವಾಬ್ದಾರಿಗಳನ್ನು ಗುರುತಿಸಲಾಗಿದೆ ಎಂದರು.
ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹದ ಅನುಭವ ಹಾಗೂ ಕಲಿತ ಪಾಠ ಹಾಗೂ ದೇಶದ ವಿವಿಧ ಸಭಾಗಗಳಲ್ಲಿ ಪ್ರವಾಹ ನಿರ್ವಹಣೆಯಲ್ಲಿ ಕೈಗೊಂಡ ಉತ್ತಮ ಅಭ್ಯಾಸಗಳನ್ನು ಕ್ರೂಢಿಕರಿಸಿ ರಾಜ್ಯದಲ್ಲಿ ಪ್ರಪ್ರಥಮವಾಗಿ ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ 2021 ನ್ನು ಸಿದ್ಧಪಡಿಸಲಾಗಿದೆ. ಈ ಯೋಜನೆಯಲ್ಲಿ ರಾಜ್ಯದ ಒಟ್ಟು 1710 ಗ್ರಾಮಗಳನ್ನು ಪ್ರವಾಹಪೀಡಿತ/ತುತ್ತಾಗುವ ಪ್ರದೇಶಗಳೆಂದು ಗುರುತಿಸಲಾಗಿದ್ದು, 758 ಗ್ರಾಮಗಳು ತೀವ್ರ ಪ್ರವಾಹ ಪರಿಸ್ಥಿತಿ ಹಾಗೂ 952 ಗ್ರಾಮಗಳಲ್ಲಿ ಮಧ್ಯಮ ಪ್ರವಾಹ ಪರಿಸ್ಥಿತಿಗೆ ತುತ್ತಾಗುವ ಗ್ರಾಮಗಳನ್ನು ವರ್ಗೀಕರಿಸಲಾಗಿದೆ ಎಂದರು.
4 NDRF ತಂಡಗಳನ್ನು ವಿಕೋಪ ನಿರ್ವಹಣೆಗೆ ಪೂರ್ವ ನಿಯೋಜನೆ ಮಾಡಲಾಗಿದೆ. ಸುಮಾರು 400ಕ್ಕೂ ಹೆಚ್ಚು SDRF ತಂಡಗಳನ್ನು ತುರ್ತು ಪರಿಹಾರ ಪರಿಕರ ಸಾಮಗ್ರಿಗಳೊಂದಿಗೆ ಸನ್ನದ್ಧಗೊಳಿಸಲಾಗಿದೆ. ಪ್ರತಿವಾರ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ನಡೆಸಿ, ಮಳೆ, ಬೆಳೆ ಹಾಗೂ ಜಲ ಸಂಪನ್ಮೂಲಗಳ ಪರಿಸ್ಥಿತಿ ಅವಲೋಕನ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಡಿಸಿಗಳಿಗೆ ನೀಡಿದ ಸೂಚನೆ ಏನು?:
- ಕಳೆದ 3 ವರ್ಷಗಳಲ್ಲಿ ಪ್ರವಾಹದಿಂದ ಕಲಿತ ಪಾಠ ಹಾಗೂ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಹಕ್ಕೆ ಜಿಲ್ಲಾ ಹಾಗೂ ತಾಲೂಕುವಾರು ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಗುರುತಿಸಬೇಕು-
- ಪ್ರವಾಹ ವಿಪತ್ತುಗಳನ್ನು ನಿರ್ವಹಣೆ ಮಾಡಲು ವಿವಿಧ ಸಮಿತಿಗಳನ್ನು ಗ್ರಾಮದ ಸದಸ್ಯರುಳನ್ನು ಒಳಗೊಂಡ ವಿವಿಧ ಸಮಿತಿಗಳನ್ನು ರಚಿಸಿ ಪ್ರತಿ ಸಮಿತಿಯ ಪಾತ್ರ ಹಾಗೂ ಜವಾಬ್ದಾರಿಯನ್ನು ನೀಡಬೇಕು.
- ಪ್ರವಾಹಕ್ಕೆ ತುತ್ತಾಗುವ ಜನಸಮುದಾಯವನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
- ಪ್ರವಾಹ ಸಂದರ್ಭಗಳಲ್ಲಿ ಪರ್ಯಾಯ ಮತ್ತು ಸುರಕ್ಷಿತ ಮಾರ್ಗಗಳನ್ನು ಗುರುತಿಸುವುದು. ಪ್ರವಾಹ ಸಂದರ್ಭಗಳಲ್ಲಿ ತುರ್ತು ಸೇವೆಗಳಿಗೆ ಒದಗಿಸಲಾಗುವ ವಿದ್ಯುತ್ ಸಂಪರ್ಕವನ್ನು ಅಡಚಣೆಯಾಗದಂತೆ ನೋಡಿಕೊಳ್ಳವುದು ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು
- ತುರ್ತು ನಿರ್ವಹಣಾ ಕೇಂದ್ರ, ಸಹಾಯವಾಣಿಗಳನ್ನು ತಾಲೂಕು ಮಟ್ಟದಲ್ಲಿ ತೆರೆಯಬೇಕು. ತುರ್ತು ನಿರ್ವಹಣೆಗೆ ಬೇಕಾದ ಸಲಕರಣೆಗಳ ಲಭ್ಯತೆ ಹಾಗೂ ಖರೀದಿಗೆ ಕ್ರಮ ಕೈಗೊಳ್ಳಬೇಕು.
- ವಿವಿಧ ಇಲಾಖೆಗಳೊಡನೆ ಸಮನ್ವಯ ಸಾಧಿಸಿ ವಿಪತ್ತು ಪರಿಣಾಮಗಳನ್ನು ತಗ್ಗಿಸಬೇಕು.