ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣ ಸಂಬಂಧ ಕೇರಳ ಪೊಲೀಸರ ಜೊತೆ ರಾಜ್ಯದ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ ಆಡಳಿತ ಮಂಡಳಿ ಸಭೆ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಕೊಲೆಯಾಗಿದೆ. ಸ್ಕೂಟರ್ನಲ್ಲಿ ಬಂದು ಕೊಲೆ ಮಾಡಿದ್ದಾರೆ. ಕೂಡಲೇ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿದ್ದೇನೆ. ಆ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಕೇರಳ ಗಡಿಭಾಗಕ್ಕೆ ಅದು ತುಂಬಾ ಹತ್ತಿರವಾಗಿದೆ. ಕರ್ನಾಟಕ ಪೊಲೀಸರು ಕೇರಳ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ. ಮಂಗಳೂರು ಎಸ್.ಪಿ ಈಗಾಗಲೇ ಕಾಸರಗೋಡು ಎಸ್.ಪಿ ಜೊತೆ ಸತತವಾಗಿ ಸಂಪರ್ಕದಲ್ಲಿದ್ದಾರೆ. ರಾಜ್ಯದ ಡಿಜಿಪಿ ಕೂಡ ಕೇರಳದ ಡಿಜಿಪಿ ಜೊತೆ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಅವರನ್ನ ಬಂಧಿಸುತ್ತೇವೆ ಎಂದರು.
ಈ ಪ್ರಕರಣವನ್ನು ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಮೇಲ್ನೋಟಕ್ಕೆ ಇದು ಪೂರ್ವನಿಯೋಜಿತ ಕೊಲೆ ಅನ್ನು ರೀತಿ ಕಾಣಿಸುತ್ತಿದೆ. ಬೇರೆ ಕೇಸ್ಗಳ ರೀತಿ ಇದರ ಹೊಂದಾಣಿಕೆ ಇದೆ. ಆದಷ್ಟು ಬೇಗ ಕ್ರಮ ಜರುಗಿಸುತ್ತೇವೆ ಎಂದರು. ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ. ಪ್ರಕರಣವನ್ನ ಎನ್ಐಎಗೆ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ, ನಮ್ಮ ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು.
ಓದಿ: Praveen murder case.. ಕೇರಳಕ್ಕೆ ಹೋಗಿ ಆರೋಪಿಗಳನ್ನು ಬಂಧಿಸುವಂತೆ ಸಿಎಂ ಸೂಚನೆ