ಬೆಂಗಳೂರು : ಬಿಗ್ಬಾಸ್ ಶೋನಿಂದಲೇ ಕರ್ನಾಟಕದಲ್ಲಿ ಮನೆ ಮಾತಾಗಿರುವ ಪ್ರಥಮ್, ಪ್ರಥಮ ಬಾರಿಗೆ ನಿರ್ದೇಶನ ಮಾಡಿ, ನಟಿಸಿರುವ ನಟ ಭಯಂಕರ ಸಿನಿಮಾ ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆಯಿತು. ಮದಗಜ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ ಮಾಡಿ, ಶುಭಾಶಯ ತಿಳಿಸಿದ್ದಾರೆ.
![Cinema team with ShreeMurali](https://etvbharatimages.akamaized.net/etvbharat/prod-images/14829764_pratham.jpg)
ಬಳಿಕ ಮಾತನಾಡಿದ ಶ್ರೀಮುರಳಿ, ಪ್ರಥಮ್ ಕಾನ್ಫಿಡೆನ್ಸ್ ಇರುವ ಹುಡುಗ. ಬಿಗ್ಬಾಸ್ನ ಆರಂಭದಲ್ಲಿ ಇವರನ್ನು ನೋಡಿ, ಏನಪ್ಪಾ, ಹೀಗೆ ಮಾತಾಡುತ್ತಾರೆ ಅಂದುಕೊಂಡೆ. ನಂತರ ನಾನೇ ಅವರ ಅಭಿಮಾನಿಯಾದೆ. ಈಗ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ರಘು ದೀಕ್ಷಿತ್ ಹಾಗೂ ನಾನು ಇಷ್ಟಪಡುವ ಉಪ್ಪಿ ಸರ್ ಹಾಡಿರುವ ಹಾಡುಗಳು ನನಗೆ ಇಷ್ಟವಾಯಿತು. ಸಿನಿಮಾ ಕೂಡ ಉತ್ತಮವಾಗಿ ಮೂಡಿ ಬಂದಿರುತ್ತದೆ ಎಂಬ ನಂಬಿಕೆಯಿದೆ ಎಂದು ಪ್ರಥಮ್ಗೆ ಗುಡ್ಲಕ್ ಹೇಳಿದರು.
ಪ್ರಥಮ್ ಮಾತನಾಡಿ, ಇದು ನನ್ನ ಮೊದಲ ನಿರ್ದೇಶನದ ಚಿತ್ರ ಕೂಡ. ಭಾರಿ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಅನ್ನಬಹುದು. ಇಂದು ಆಡಿಯೋ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಅನಾವರಣಗೊಳಿಸುತ್ತೇವೆ ಎಂದರು.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ
ಸಿನಿಮಾದಲ್ಲಿ ಪ್ರಥಮ್ಗೆ ಜೋಡಿಯಾಗಿ ಫ್ರಾನ್ಸ್ ನಿವಾಸಿ ನಿಹಾರಿಕ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಚಂದನ ನಟಿಸಿದ್ದಾರೆ. ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ನಟ ಭಯಂಕರ ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಪ್ರಥಮ್ ಪ್ಲಾನ್ ಮಾಡಿದ್ದಾರೆ.
![Pratham with co stars](https://etvbharatimages.akamaized.net/etvbharat/prod-images/14829764_pratham_film.jpg)
ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಗೀತರಚನೆಕಾರ ಡಾ.ವಿ.ನಾಗೇಂದ್ರಪ್ರಸಾದ್, ಗಿರೀಶ್, ಅರ್ಜುನ್, ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಥಮ್ಗೆ ಶುಭ ಹಾರೈಸಿದರು.