ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳ ರಕ್ಷಣೆಯ ದೃಷ್ಠಿಯಿಂದ ಜಾರಿಗೆ ತಂದಿರುವ ಬೀದಿಬದಿ ವ್ಯಾಪಾರಿಗಳ ನಿಯಂತ್ರಣ ಕಾಯ್ದೆ-2014 ಅನ್ನು ಜಾರಿಗೆ ತರದಿದ್ದರೆ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳಬಹುದೆಂದು ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಕುರಿತು ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಬೀದಿ ಬದಿ ವ್ಯಾಪಾರಿಗಳು ಅಭದ್ರತೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇವ್ರ ಬಗ್ಗೆ ಗಮನ ಹರಿಸುವವರು ಯಾರಿಲ್ಲ. ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ ಕಾಯ್ದೆ-2014 ಅನ್ನು ಜಾರಿಗೆ ತಂದು ನಾಲ್ಕು ವರ್ಷಗಳು ಕಳೆದರೂ ನಮ್ಮ ರಾಜ್ಯದಲ್ಲಿ ಇದು ಸರಿಯಾದ ರೀತಿ ಸದುಪಯೋಗಕ್ಕೆ ಬಂದಿಲ್ಲ ಎಂದು ತಿಳಿಸಿದರು.
ಈ ವೇಳೆ ನ್ಯಾಯಪೀಠ, ಬೀದಿಬದಿ ವ್ಯಾಪಾರಿಗಳ ನಿಯಂತ್ರಣ ಕಾಯ್ದೆ-2014 ಜಾರಿಗೆ ತರದಿದ್ದರೆ ಬಿಬಿಎಂಪಿ ವಿರುದ್ಧ ದೂರು ದಾಖಲಿಸಬಹುದು ಎಂದು ಖಡಕ್ ವಾರ್ನಿಂಗ್ ಕೊಟ್ಟು, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಅನ್ನೋದ್ರ ಬಗ್ಗೆ ವಿವರ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ, ಆಗಸ್ಟ್ 22 ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.