ಬೆಂಗಳೂರು: ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣವನ್ನಪ್ಪಿದ್ದು, ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಅಗಲಿದ ನೆಚ್ಚಿನ ನಟನ ಅಂತಿಮ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ರಾತ್ರಿ ಪೂರ್ತಿ ಸಾವಿರಾರು ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದುಕೊಂಡರು.
ಪ್ರತಿಭಾನ್ವಿತ ನಟನ ಸಾವಿನಿಂದಾಗಿ ಕಣ್ಣೀರು ಹರಿಸಿರುವ ಸಾವಿರಾರು ಅಭಿಮಾನಿಗಳು ರಾತ್ರಿ ಪೂರ್ತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ಇಂದು ಇಡೀ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿರುವ ಕಾರಣ, ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಬಂದು ನೆಚ್ಚಿನ ನಟನ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ. ನಿನ್ನೆ ರಾತ್ರಿ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನ ಕಂಠೀರವ ಕ್ರೀಡಾಂಗಣಕ್ಕೆ ತೆಗೆದುಕೊಂಡು ಬರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನ ಪರ ಜೈಕಾರ ಹಾಕಿದರು. ಈ ವೇಳೆ ನೂಕುನುಗ್ಗಲು ಉಂಟಾದ ಕಾರಣ ಪೊಲೀಸರು ಲಘು-ಲಾಠಿ ಪ್ರಹಾರ ಸಹ ನಡೆಸಿದರು.
ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕಾಗಿ ರಾತ್ರಿ ಇಡೀ ಕಂಠೀರವ ಸ್ಟೇಡಿಯಂಗೆ ಆಗಮಿಸಿದ ಅಭಿಮಾನಿಗಳು ನೆಚ್ಚಿನ ನಟನ ಪರ ಜೈಕಾರ ಕೂಗಿದ್ದಾರೆ.
ಇದನ್ನೂ ಓದಿರಿ: ಪುನೀತ್ ರಾಜ್ಕುಮಾರ್ ನಿಧನ.. ರಾಷ್ಟ್ರಧ್ವಜ ಹೊದಿಸಿ ಸಿಎಂ ಬೊಮ್ಮಾಯಿ ಗೌರವ
ಇಂದು ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಸಾಧ್ಯತೆ ಇರುವ ಕಾರಣ ಯಾವುದೇ ರೀತಿಯ ಲೋಪದೋಷವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ರಾಜ್ಯ ಸರ್ಕಾರ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿರುವ ಕಾರಣ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲು ಹಾಕಿಸಿದೆ.