ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೈದಾನಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆ ತೆರೆಯಲು ತಾತ್ಕಾಲಿಕ ಪರವಾನಿಗೆ ಪಡೆಯುವ ಸಂಬಂಧ ನಗರ ಪೊಲೀಸ್ ಇಲಾಖೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸೇವಾಸಿಂಧು ವೆಬ್‌ಸೈಟ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇಂದು (ಅ. 29) ಬೆಳಗ್ಗೆ 8 ಗಂಟೆಯಿಂದ ನಾಳೆ ಸಂಜೆ 5.30ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆ ಶುಲ್ಕವಾಗಿ 5 ಸಾವಿರ ರೂ. ಅನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಬೇಕು. ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಅಡ್ಮಿನಿಸ್ಟ್ರೇಷನ್ ಬೆಂಗಳೂರು ನಗರ ಹೆಸರಿನಲ್ಲಿ 25 ಸಾವಿರ ರೂ. ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಪಡೆದ ಪ್ರತಿಯನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಬೇಕು. ಅದನ್ನು ಠೇವಣಿಯಾಗಿಸಲಾಗುತ್ತದೆ. ನಂತರ ಡಿಜಿಪಿ ಕರ್ನಾಟಕ ಫೈರ್ ಅಂಡ್ ಎಮರ್ಜೆನ್ಸಿ ಸರ್ವಿಸಸ್ ಬೆಂಗಳೂರು ಹೆಸರಿನಲ್ಲಿ 5 ಸಾವಿರ ರೂ. ಡಿಡಿ ಪಡೆದು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಬೇಕು. ಡಿಡಿಗಳನ್ನು ರಾಷ್ಟ್ರೀಯ, ಖಾಸಗಿ ಬ್ಯಾಂಕ್ಗಳಲ್ಲಿ ಪಡೆದು ಅಪ್‌ಲೋಡ್ ಮಾಡಬೇಕು.
ಅರ್ಜಿದಾರರು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ವಾಸ ಸ್ಥಳದ ಬಗ್ಗೆ ಸ್ವಯಂ ದೃಢೀಕೃತ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ನಕಲು ಪ್ರತಿ, ಜಿಎಸ್‌ಟಿ ಸಂಖ್ಯೆ ಪ್ರತಿ ನೀಡಬೇಕು.
ಅರ್ಜಿದಾರ ಒಂದು ಮೈದಾನದ ಪರವಾನಗಿಗೆ ಅರ್ಜಿ ಸಲ್ಲಿಸಿದ ಬಳಿಕ ಆತನ ಕುಟುಂಬದ ಸದಸ್ಯರು ಬೇರೆ ಮೈದಾನದಲ್ಲಿ ಅರ್ಜಿ ಸಲ್ಲಿಸಿಲ್ಲ ಎಂಬುದರ ಬಗ್ಗೆ 20 ರೂ. ಮೌಲ್ಯದ ಸ್ಟ್ಯಾಂಪ್ ಪೇಪರ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕು. ಈ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಅರ್ಜಿ ಸಂಖ್ಯೆಯೊಂದಿಗೆ ಈ ಎಲ್ಲ ಡಿಡಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಅ.30ರ ಸಂಜೆ 5.30ರೊಳಗೆ ಉಪಪೊಲೀಸ್ ಆಯುಕ್ತರ (ಆಡಳಿತ) ಕಚೇರಿಗೆ ಸಲ್ಲಿಸಬೇಕು.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ:
ಅ.31ರಂದು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಬಿಬಿಎಂಪಿ ಆಯುಕ್ತರು ಹಾಗೂ ಗೃಹ ರಕ್ಷಕದಳ, ನಾಗರಿಕ ರಕ್ಷಣೆ ಮತ್ತು ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ನಿಗದಿ ಪಡಿಸುವ ಮೈದಾನಗಳಲ್ಲಿ ಮಾತ್ರ ಪಟಾಕಿ ಮರಾಟ ಮಳಿಗೆಗೆ ತಾತ್ಕಾಲಿಕ ಪರವಾನಗಿ ನೀಡಲಾಗುವುದು. ಮೈದಾನಗಳ ಬಗ್ಗೆ ಮಾಹಿತಿಗಾಗಿ ಪೊಲೀಸ್ ಆಯುಕ್ತರ ಕಚೇರಿ ಜಾಲತಾಣ ನೋಡಬಹುದು.
ಇದನ್ನೂ ಓದಿ: ಘನತ್ಯಾಜ್ಯ ಘಟಕದಿಂದ ನದಿ ನೀರು ವಿಷ: ಪರೀಕ್ಷೆ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆಗೆ ಹೈಕೋರ್ಟ್ ಆದೇಶ
ಅ. 31ರ ಮಧ್ಯಾಹ್ನ 3 ಗಂಟೆಗೆ ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಸ್ಥಾನದ ಆವರಣದಲ್ಲಿ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಫಲಾನುಭವಿಗಳು ನ. 2ರಂದು ಸೇವಾಸಿಂಧು ಅಥವಾ ಬೆಂಗಳೂರು ಒನ್ ವೆಬ್‌ಪೋರ್ಟಲ್‌ನಲ್ಲಿ ತಾತ್ಕಾಲಿಕ ಪರವಾನಿಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಆಡಳಿತ ವಿಭಾಗ ಉಪ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.